ಪ್ರಾದೇಶಿಕ

ಪ್ರಭಾವಿ ಮಾಲಕರ ವ್ಯಾಪಾರ ಮಳಿಗೆಯ ಹಿತಾಸಕ್ತಿಯನ್ನು ರಕ್ಷಿಸಲು ಬಡಪಾಯಿ ಬೀದಿಬದಿ ವ್ಯಾಪಾರಿಗಳನ್ನು ಹೊರದಬ್ಬುವ ಪಿತೂರಿ- ಸಿಪಿಐಎಂ, ಡಿವೈಎಫ್ಐ ಆರೋಪ



ಪಾಲಿಕೆಯಿಂದ ದೌರ್ಜನ್ಯಕ್ಕೊಳಗಾದ ಪಡೀಲ್ ನ ಅಂಗವಿಕಲ ಬೀದಿಬದಿ ವ್ಯಾಪಾರಿಗಳನ್ನು ಭೇಟಿ ಮಾಡಿ ಧೈರ್ಯ ತುಂಬಿದ ಸಿಪಿಐಎಂ, ಡಿವೈಎಫ್ಐ ಮುಖಂಡರ ನಿಯೋಗ.




 ಪಡೀಲ್ ಬಜಾಲ್ ಮುಖ್ಯರಸ್ತೆಯಲ್ಲಿ ಕಳೆದ ಹಲವಾರು ವರುಷಗಳಿಂದ ಬೀದಿವ್ಯಾಪಾರ ಮಾಡುತ್ತಲಿದ್ದ ಇಬ್ಬರು ವಿಕಲಾಂಗರಾದ ಚಂದ್ರಹಾಸ ಪೂಜಾರಿ ಮತ್ತು ಸುನೀತಾ ಪೂಜಾರಿ ಅವರ ಅಂಗಡಿ ಸೊತ್ತುಗಳನ್ನು ಜೆಸಿಪಿ ಹರಿಸಿ ಪುಡಿಗೈದಿರುವ ಮಂಗಳೂರು ಮಹಾನಗರ ಪಾಲಿಕೆ ದೌರ್ಜನ್ಯವನ್ನು ಡಿವೈಎಫ್ಐ, ಸಿಪಿಐಎಂ ಬಜಾಲ್ ವಿಭಾಗ ಸಮಿತಿ ಆಕ್ರೋಶವನ್ನು ವ್ಯಕ್ತಪಡಿಸಿದೆ. ಹಾಗೂ ಸಂತ್ರಸ್ತ ಬೀದಿಬದಿ ವ್ಯಾಪಾರಿಗಳ ಹೋರಾಟಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದೆ. ಪಾಲಿಕೆ ಕೂಡಲೇ ಪರ್ಯಾಯಾ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದೆ. 


ಬಜಾಲ್ ಜಲ್ಲಿಗುಡ್ಡೆ ಹಾಗೂ ಕರ್ಮಾರ್ ಪ್ರದೇಶದ ನಿವಾಸಿಗಳಾದ ಸಂತ್ರಸ್ತ ಚಂದ್ರಹಾಸ ಪೂಜಾರಿ ಹಾಗೂ ಸುನೀತಾ ಪೂಜಾರಿ ದೈಹಿಕವಾಗಿ ಅಂಗವೈಕಲ್ಯತೆಯನ್ನು ಹೊಂದಿದ್ದು ದಿನನಿತ್ಯದ ಜೀವನ ನಿರ್ವಹಣೆಗಾಗಿ ಪಡೀಲ್ ರಸ್ತೆ ಬದಿಯಲ್ಲಿ ಯಾರಿಗೂ ತೊಂದರೆಯಾಗದಂತೆ ಕಳೆದ ಹಲವು ವರುಷಗಳಿಂದ ಹೂವುಗಳನ್ನು ಮಾರುತ್ತಾ ಜೀವನ ಸಾಗಿಸುತ್ತಿದ್ದರು. ಸುನೀತಾ ಪೂಜಾರಿಯು ಇತ್ತೀಚೆಗೆ ಕ್ಯಾನ್ಸರ್ ಕಾಯಿಲೆಗೆ ತುತ್ತಾದ ಗಂಡನನ್ನು ಕಳೆದುಕೊಂಡು ತಮ್ಮ ಮಕ್ಕಳನ್ನು ಸಾಕುವ ಹೊಣೆಗಾರಿಕೆ ತನ್ನ ಹೆಗಲ ಮೇಲೆರಿಸಿ ಬೀದಿವ್ಯಾಪಾರಕ್ಕೆ ಮುಂದಾಗಿದ್ದರು.


 ಅದೇ ರೀತಿ ಚಂದ್ರಹಾಸ ಪೂಜಾರಿ ಶೇಕಡಾ 75 ಅಂಗವೈಕಲ್ಯತೆ ಹೊಂದಿದ್ದು ತನ್ನ ಕುಟುಂಬ ನಿರ್ವಹಣೆ ಮತ್ತು ಮಗಳಿಗೆ ವಿದ್ಯಾಬ್ಯಾಸ ನೀಡಲು ತನ್ನ ಬೀದಿ ಬದಿ ದುಡಿಮೆಯನ್ನೇ ನಂಬಿಕೊಂಡು ಬಂದಿದ್ದಾರೆ. ಈ ರೀತಿ ಸ್ವಾವಲಂಬಿ ಬದುಕನ್ನು ತಮ್ಮದಾಗಿಸಿಕೊಂಡಿದ್ದ ಬಡಪಾಯಿ ಬೀದಿಬದಿ ವ್ಯಾಪಾರಿಗಳ ಮೇಲೆ ಪಾಲಿಕೆ ಆಡಳಿತ ಪೊಲೀಸ್ ಬಲಪ್ರಯೋಗದಿಂದ ಜೆಸಿಬಿ ಹರಿಸಿ ಇದ್ದ ವಸ್ತುಗಳನ್ನೆಲ್ಲಾ ದ್ವಂಸಗೈದಿದ್ದಾರೆ. ಅವರ ಅಮೂಲ್ಯ ವಸ್ತಗಳನ್ನು ವಶಪಡಿಸಿಕೊಂಡಿರುವುದು ನಿಜಕ್ಕೂ ಅಮಾನವೀಯ ನಡೆ. ಈ ಬಡ ಬೀದಿ ವ್ಯಾಪಾರಿಗಳ ಮೇಲೆ ದಾಳಿ ನಡೆದಾಗಲೂ ಸ್ಥಳೀಯ ಬಿಜೆಪಿ ಮುಖಂಡರಾಗಲಿ, ಕಾಂಗ್ರೇಸ್ ಮುಖಂಡರ್ಯಾರೂ ಇವರ ಬೆಂಬಲಕ್ಕೆ ದಾವಿಸಿಲ್ಲ. ಕಾಂಗ್ರೇಸ್ ಸರಕಾರ ಅಧಿಕಾರದಲ್ಲಿದ್ದರೂ ಈ ಬಡವರ ಮೇಲೆ ಜೆಸಿಬಿ ಹರಿಸಿ ದ್ವಂಸಗೈಯುವ ನಡೆ ಯುಪಿ ಬಿಜೆಪಿ ಸರಕಾರದ ಮಾದರಿಯಂತೆ ಕಾಣುತ್ತಿದೆ. ಈ ದಾಳಿಯು ಅಲ್ಲೇ ತಲೆ ಎತ್ತಲಿರುವ ಪ್ರಭಾವಿ ಮಾಲಕರ ವ್ಯಾಪಾರ ಮಳಿಗೆಯ ಹಿತಾಸಕ್ತಿಯನ್ನು ರಕ್ಷಿಸಲು ಬಡಪಾಯಿ ಬಡ ಬೀದಿಬದಿ ವ್ಯಾಪಾರಿಗಳನ್ನು ಹೊರದಬ್ಬುವ ಪಿತೂರಿಯಂತೆ ಕಾಣುತ್ತಿದೆ. 



ಮಂಗಳೂರು ಮಹಾನಗರ ಪಾಲಿಕೆಯು ಬೀದಿಬದಿ ಚಂದ್ರಹಾಸ ಪೂಜಾರಿ ಬಜಾಲ್ ಮತ್ತು ಸುನೀತಾ ಪೂಜಾರಿ ಮೇಲೆ ನಡಿಸಿದ ದಬ್ಬಾಳಿಕೆಯನ್ನು ಡಿವೈಎಫ್ಐ, ಸಿಪಿಐಎಂ ಬಜಾಲ್ ವಿಭಾಗ ಸಮಿತಿಯು ಖಂಡನೆಯನ್ನು ವ್ಯಕ್ತಪಡಿಸುತ್ತದೆ. ಇಂದು ಸಿಪಿಐಎಂ, ಡಿವೈಎಫ್ಐ ಬಜಾಲ್ ವಿಭಾಗ ಸಮಿತಿಯ ಮುಖಂಡರ ನಿಯೋಗ ಸಂತ್ರಸ್ತ ಬೀದಿಬದಿ ವ್ಯಾಪಾರಿಗಳನ್ನು ಹಾಗೂ ದ್ವಂಸಗೈದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ ಮತ್ತು ಸಂತ್ರಸ್ತರಿಗೆ ಧೈರ್ಯವನ್ನು ತುಂಬಿದೆ. ಪಾಲಿಕೆ ಆಡಳಿತ ಸಂತ್ರಸ್ತ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೂ ಇರುವ ಸ್ಥಳದಲ್ಲೇ ವ್ಯಾಪಾರಕ್ಕೆ ಅವಕಾಶಮಾಡಿ ಕೊಡಬೇಕು. ಹಾಗೂ ವಶಡಿಸಿಕೊಂಡಿರುವ ಎಲ್ಲಾ ವಸ್ತುಗಳನ್ನು ಕೂಡಲೇ ಹಿಂದಿರುಗಿಸಲು ಕ್ರಮಕೈಗೊಳ್ಳಬೇಕೆಂದು ಡಿವೈಎಫ್ಐ, ಸಿಪಿಐಎಂ ಬಜಾಲ್ ವಿಭಾಗ ಸಮಿತಿಯು ಒತ್ತಾಯಿಸಿದೆ. ನಿಯೋಗದಲ್ಲಿ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸಿಪಿಐಎಂ ವಿಭಾಗ ಸಮಿತಿ ಕಾರ್ಯದರ್ಶಿ ದೀಪಕ್ ಬಜಾಲ್, ಸಿಪಿಐಎಂ ಜಲ್ಲಿಗುಡ್ಡೆ ಶಾಖಾ ಕಾರ್ಯದರ್ಶಿ ಜಯಪ್ರಕಾಶ್ ಜಲ್ಲಿಗುಡ್ಡೆ, ಕೇಶವ ಚೌಟ, ಡಿವೈಎಫ್ಐ ಮುಖಂಡರಾದ ಯಶ್ ರಾಜ್ ಬಜಾಲ್, ಸಾಮಾಜಿಕ ಕಾರ್ಯಕರ್ತ ಕಮಲಾಕ್ಷ ಬಜಾಲ್,  ಆಕಾಶ್ ಮುಂತಾದವರು ಉಪಸ್ಥಿತರಿದ್ದರು.

ಟ್ಯಾಗ್‌ಗಳು: ಪ್ರಾದೇಶಿಕ