ರಾಜ್ಯ

ಸಚಿವ ಕೃಷ್ಣಭೈರೇಗೌಡ ಆ್ಯಕ್ಷನ್ ಮೋಡ್: ದಿಢೀರ್ ರೌಂಡ್ಸ್ ಬೆನ್ನಲ್ಲೇ ಮೊದಲ ವಿಕೆಟ್ ಪತನ, ಎಂಜಿನಿಯರ್ ಸಸ್ಪೆಂಡ್!

 



ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೃಷ್ಣಭೈರೇಗೌಡ ಅವರು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ. ಇತ್ತೀಚೆಗಷ್ಟೇ ನಡೆದ ಪ್ರಥಮ ಅಧಿಕೃತ ಸಭೆಯಲ್ಲಿ, "ನಗರದ ರಸ್ತೆ ಗುಂಡಿ ಮುಚ್ಚುವುದು ಅಷ್ಟೊಂದು ಕಷ್ಟದ ಕೆಲಸವೇ? ಇದೇನೂ ರಾಕೆಟ್ ಸೈನ್ಸ್ ಅಲ್ಲ" ಎಂದು ಜಿಬಿಎ (GBA) ಅಧಿಕಾರಿಗಳಿಗೆ ಕ್ಲಾಸ್ ತಗೆದುಕೊಂಡಿದ್ದ ಸಚಿವರು, ಈಗ ನೇರ ಕಣಕ್ಕಿಳಿದು ಶಾಕ್ ನೀಡಿದ್ದಾರೆ. ರಸ್ತೆ ಕಾಮಗಾರಿಯಲ್ಲಿ ಕಳ್ಳಾಟವಾಡಿದ ಆರೋಪದ ಹಿನ್ನೆಲೆಯಲ್ಲಿ ಮೊದಲ ವಿಕೆಟ್ ಪತನವಾಗಿದ್ದು, ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ.

ಕಾಮಗಾರಿಯಲ್ಲಿ ಕಳಪೆ: ಇಂಜಿನಿಯರ್ ಅಮಾನತು

ನಗರದ ಕ್ರೆಸೆಂಟ್ ರಸ್ತೆಯ ಡಾಂಬರೀಕರಣ (ಆಸ್ಫಾಲ್ಟಿಂಗ್) ಪ್ರಕ್ರಿಯೆಯಲ್ಲಿ ತೀವ್ರ ನಿರ್ಲಕ್ಷ್ಯ ಹಾಗೂ ಕರ್ತವ್ಯಲೋಪ ಎಸಗಿದ ಕಾರಣಕ್ಕಾಗಿ ಸಂಪಂಗಿರಾಮನಗರದ ಸಹಾಯಕ ಇಂಜಿನಿಯರ್ (AE) ಪೂಜಾರಪ್ಪ ಅವರನ್ನು ಜಿಬಿಎ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.

ಅಮಾನತಿಗೆ ಮುಖ್ಯ ಕಾರಣಗಳು:

  • ರಸ್ತೆ ಡಾಂಬರೀಕರಣದ ವೇಳೆ ನಿಗದಿತ ಪ್ರಮಾಣದ ಸಾಮಗ್ರಿ ಬಳಸದೇ ಇರುವುದು.

  • ನಿಯಮಾವಳಿಗಳ ಪ್ರಕಾರ ಇರಬೇಕಾದ ದಪ್ಪ ಗಾತ್ರದ ಆಸ್ಫಾಲ್ಟಿಂಗ್ ಮಾಡದೆ ಬೇಜವಾಬ್ದಾರಿತನ ಪ್ರದರ್ಶಿಸಿರುವುದು.

ಗುತ್ತಿಗೆದಾರನಿಗೂ ಬಿತ್ತು ಬಿಸಿ: ಬ್ಲ್ಯಾಕ್‌ಲಿಸ್ಟ್‌ಗೆ ಸೂಚನೆ!

ಕೇವಲ ಅಧಿಕಾರಿಗಳ ವಿರುದ್ಧ ಮಾತ್ರವಲ್ಲದೆ, ಕಳಪೆ ರಸ್ತೆ ನಿರ್ಮಿಸಿದ ಗುತ್ತಿಗೆದಾರನಿಗೂ ಸಚಿವರು ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾರೆ. ಸಂಬಂಧಪಟ್ಟ ಕಾಂಟ್ರಾಕ್ಟರ್‌ನ ಸಂಪೂರ್ಣ ಹಿನ್ನೆಲೆ ಹಾಗೂ ವಿವರಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿರುವ ಸಚಿವರು, ಕಾಮಗಾರಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳದ ಸದರಿ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ (Blacklist) ಸೇರಿಸುವಂತೆ ಆದೇಶಿಸಿದ್ದಾರೆ.

ಖಡಕ್ ಸಂದೇಶ: ಸಚಿವರ ಈ ದಿಢೀರ್ ನಡೆ ಮತ್ತು ಕಠಿಣ ಕ್ರಮವು ಬೆಂಗಳೂರಿನ ರಸ್ತೆ ಕಾಮಗಾರಿಗಳಲ್ಲಿ ಇನ್ನು ಮುಂದೆ ರಾಜೀ ಮಾಡಿಕೊಳ್ಳುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಇಲಾಖೆಯ ಇತರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ರವಾನಿಸಿದಂತಾಗಿದೆ.

ಟ್ಯಾಗ್‌ಗಳು: ರಾಜ್ಯ