ಕ್ರೈಂ

ಟೋಲ್ ಕಟ್ಟಲು ತಗಾದೆ: ಸಿಬ್ಬಂದಿಯನ್ನು ಕಾರಿನ ಬಾಗಿಲಿಗೆ ನೇತುಹಾಕಿಕೊಂಡು 12 ಕಿ.ಮೀ. ಓಡಿಸಿದ ಕಿರಾತಕರು!


courtesy: Etv Bharat


ರಾಯ್‌ಗಂಜ್ (ಪಶ್ಚಿಮ ಬಂಗಾಳ): ಟೋಲ್ ಶುಲ್ಕ ಪಾವತಿಸಲು ನಿರಾಕರಿಸಿ, ಅಲ್ಲಿನ ಸಿಬ್ಬಂದಿಯನ್ನೇ ಕಾರಿನ ಬಾಗಿಲಿನಲ್ಲಿ ಬರೋಬ್ಬರಿ 12 ಕಿಲೋಮೀಟರ್ ದೂರದವರೆಗೆ ಎಳೆದೊಯ್ದ ಭೀಕರ ಮತ್ತು ಆಘಾತಕಾರಿ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ಬೆಳಕಿಗೆ ಬಂದಿದೆ. ಸಕಾಲದಲ್ಲಿ ಸಾರ್ವಜನಿಕರು ಹಾಗೂ ಪೊಲೀಸರು ತೋರಿದ ಸಮಯಪ್ರಜ್ಞೆಯಿಂದಾಗಿ ಟೋಲ್ ನೌಕರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಅಸಲಿಗೆ ನಡೆದಿದ್ದೇನು?

ಡಾರ್ಜಿಲಿಂಗ್ ಜಿಲ್ಲೆಯ ಫುಲ್ಬರಿ ವ್ಯಾಪ್ತಿಯ ಘೋಷ್‌ಪುಕುರ್ ಟೋಲ್ ಪ್ಲಾಜಾ ಬಳಿ ಶುಕ್ರವಾರ ರಾತ್ರಿ ಈ ಘಟನೆ ಜರುಗಿದೆ. ಟೋಲ್ ಕಟ್ಟುವ ವಿಚಾರವಾಗಿ ಕಾರಿನ ಚಾಲಕ ಹಾಗೂ ಸಿಬ್ಬಂದಿ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ಆರೋಪಿಗಳು ಟೋಲ್ ಪಾವತಿಸದೆ ಕಾರನ್ನು ಮುನ್ನಡೆಸಲು ಯತ್ನಿಸಿದಾಗ, ಸಿಬ್ಬಂದಿ ಕಾರನ್ನು ತಡೆಯಲು ಬಾಗಿಲನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಆದರೆ, ಮಾನವೀಯತೆ ಮರೆತ ಚಾಲಕ ಕಾರಿನ ವೇಗವನ್ನು ಹೆಚ್ಚಿಸಿ, ಆತನನ್ನು ಹಾಗೆಯೇ ನೇತುಹಾಕಿಕೊಂಡು ಜೂಮ್ ಮಾಡಿದ್ದಾನೆ.

ರೇಸ್ ಕಾರ್‌ನಂತೆ ಬೆನ್ನಟ್ಟಿದ ಯುವಕರ ತಂಡ:

ಅದೇ ರಸ್ತೆಯಲ್ಲಿ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಯುವಕರ ಗುಂಪೊಂದು ಈ ಕರುಣಾಜನಕ ದೃಶ್ಯವನ್ನು ಗಮನಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಯುವಕರು, ಟೋಲ್ ಸಿಬ್ಬಂದಿ ಪ್ರಾಣ ಉಳಿಸಲು ಆ ಕಾರನ್ನು ಬೆನ್ನಟ್ಟಿದ್ದಾರೆ.

ಪ್ರತ್ಯಕ್ಷದರ್ಶಿ ಯುವಕನ ಹೇಳಿಕೆ: "ನಾವು ಕಾರನ್ನು ಓವರ್‌ಟೇಕ್ ಮಾಡಿ ನಿಲ್ಲಿಸಲು ಹರಸಾಹಸ ಪಟ್ಟೆವು. ಆದರೆ ಆರೋಪಿಗಳು ನಮಗೆ ದಾರಿ ಬಿಡಲಿಲ್ಲ. ಒಂದು ವೇಳೆ ಆತ ಕೈಬಿಟ್ಟು ಕೆಳಗೆ ಬಿದ್ದಿದ್ದರೆ ನಮ್ಮ ವಾಹನದ ಚಕ್ರದ ಅಡಿಗೆ ಸಿಲುಕುವ ಅಪಾಯವಿತ್ತು. ಹೀಗಾಗಿ ಇಡೀ ಘಟನೆಯನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಾ, ಸ್ವಲ್ಪ ದೂರದಲ್ಲೇ ಹಿಂಬಾಲಿಸಿ ಪೊಲೀಸರಿಗೆ ರಹಸ್ಯ ಮಾಹಿತಿ ರವಾನಿಸಿದೆವು."

ಮುಂದಿನ ಟೋಲ್ ಗೇಟ್‌ನಲ್ಲಿ ಲಾಕ್!

ಯುವಕರು ನೀಡಿದ ಸುಳಿವಿನ ಆಧಾರದ ಮೇಲೆ ಅಲರ್ಟ್ ಆದ ಪೊಲೀಸರು ಫುಲ್ಬರಿ ಬಳಿಯ ಮುಂದಿನ ಟೋಲ್ ಪ್ಲಾಜಾದಲ್ಲಿ ಕಾಯುತ್ತಿದ್ದರು. ಅಲ್ಲಿ ಭಾರಿ ಟ್ರಾಫಿಕ್ ಜಾಮ್ ಇದ್ದಿದ್ದರಿಂದ ಆರೋಪಿಗಳ ಕಾರು ಅನಿವಾರ್ಯವಾಗಿ ನಿಲ್ಲಬೇಕಾಯಿತು. ಇದೇ ಸಂಚನ್ನು ಬಳಸಿ ಪೊಲೀಸರು ಕಾರನ್ನು ಸುತ್ತುವರಿದು, ಬಾಗಿಲಿಗೆ ನೇತಾಡುತ್ತಿದ್ದ ಸಿಬ್ಬಂದಿಯನ್ನು ರಕ್ಷಿಸಿ, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಟೋಲ್ ಸಿಬ್ಬಂದಿ ಸುರಕ್ಷಿತವಾಗಿದ್ದು, ಕೈಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮದ್ಯದ ಅಮಲಿನಲ್ಲಿ ಸವಾರಿ?

ಪೊಲೀಸ್ ಮೂಲಗಳ ಪ್ರಕಾರ, ಕಾರಿನೊಳಗೆ ಚಾಲಕನ ಜೊತೆಗೆ ಮತ್ತೊಬ್ಬ ಪುರುಷ ಹಾಗೂ ಮಹಿಳೆ ಇದ್ದರು ಎನ್ನಲಾಗಿದೆ. ಘಟನೆಯ ಸಮಯದಲ್ಲಿ ಮೂವರೂ ಮದ್ಯದ ಅಮಲಿನಲ್ಲಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸದ್ಯ ಜಲ್ಪೈಗುರಿ ಠಾಣೆ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದು, ಯುವಕರು ನೀಡಿದ ವೀಡಿಯೊ ಸಾಕ್ಷ್ಯದ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ.

ಟ್ಯಾಗ್‌ಗಳು: ಕ್ರೈಂ ದೇಶ ವಿದೇಶ