ಬ್ರಹ್ಮ ಶ್ರೀ ಮುಗೇರ ಮಹಾಕಾಳಿ ದೈವಸ್ಥಾನ ದೇರೆಬೈಲ್, ಕೊಂಚಾಡಿ ಇದರ ವತಿಯಿಂದ ನಾಲ್ಕನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮ ದೈವಸ್ಥಾನದ ವಠಾರದಲ್ಲಿ ಜರಗಿತು. ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ನಿವೃತ್ತ ತಹಶೀಲ್ದಾರ್ ಸೀತಾರಾಮ್ ಕೊಂಚಾಡಿಯವರು ಮಾತಾಡುತ್ತಾ ಹಿಂದಿನ ಕಾಲದಲ್ಲಿ ನಮ್ಮ ಆಹಾರ ಪದ್ಧತಿ ಯಾವ ರೀತಿ ಇದ್ದು ಎನ್ನುವುದನ್ನು ಇಂದಿನ ಸಮುದಾಯಕ್ಕೆ ಪರಿಚಯಿಸುವುದೇ ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದರು. ಅತಿಥಿಯಾಗಿ ಭಾಗವಹಿಸಿದ್ದ ಪರಿವರ್ತನಾ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಕೃಷ್ಣಾನಂದ.ಡಿ ಯವರು ಮಾತಾಡುತ್ತಾ, ಹಿಂದಿನ ಕಾಲದಲ್ಲಿ ಅತ್ಯಂತ ಬಡತನ ಮತ್ತು ವಿಪರೀತ ಮಳೆಯ ಕಾರಣ ತೀವ್ರ ಆಹಾರದ ಕೊರತೆಯಿದ್ದ ಸಂದರ್ಭದಲ್ಲಿ ಜನರು ಪರಿಸರದಲ್ಲಿ ಸಿಗುತ್ತಿದ್ದ ಸೊಪ್ಪು, ಗೆಡ್ಡೆ ಗೆಣಸು, ಹಣ್ಣು ಹಂಪಲುಗಳನ್ನು ಬಳಸಿ ಆಹಾರ ತಯಾರಿಸುತ್ತಿದ್ದರು ಎಂದು ನುಡಿದರು.
ಇದೇ ವೇದಿಕೆಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡ 80ಕ್ಕಿಂತ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಹಳೆಯ ಮತ್ತು ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಿ ಇರುವ ಸಿ.ಖಲೀಲ್ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನೆರೆದಿದ್ದವರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಭೆಯ ವೇದಿಕೆಯಲ್ಲಿ ಬ್ರಹ್ಮ ಶ್ರೀ ಮುಗೇರ ಮಹಾಕಾಳಿ ದೈವಸ್ಥಾನ ಕೊಂಚಾಡಿ ಇದರ ಅಧ್ಯಕ್ಷರಾದ ಶೀನ ಮುಗೇರ, ಖಜಾಂಚಿ ಗಿರಿಯಪ್ಪ, ಗುರಿಕಾರಾದ ಗೋಪಾಲ್, ಶಿವಾನಂದ, ಪುರುಷೋತ್ತಮ, ಚಂದ್ರಾವತಿ ಟೀಚರ್, ಶೈಲಾ ಶ್ರೀ, ಸೀತಾರಾಮ್ ಉಪಸ್ಥಿತರಿದ್ದರು. ಪ್ರಸಾದ್ ಕೊಂಚಾಡಿ ಕಾರ್ಯಕ್ರಮ ನಿರೂಪಿಸಿದರು.

