ಬಜ್ಪೆ ಕೆಂಜಾರು 3ನೇ ಬ್ಲಾಕ್ ರಸ್ತೆ ಮಾಯವಾಗುವ ಭೀತಿಯಲ್ಲಿ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಬಜ್ಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆಂಜಾರು 3ನೇ ವಿಭಾಗದ ಜನರು ಮಂಗಳೂರು, ಬಜ್ಪೆ, ಕಾವೂರು ಮುಂತಾದ ಪೇಟೆಯನ್ನು ಮತ್ತು ಮಂಗಳೂರು ವಿಮಾನ ನಿಲ್ದಾಣ ರಸ್ತೆಯನ್ನು ಸಂಪಕಿ೯ಸಲು ಪೇಜಾವರ ಪಡ್ಪು ಪ್ರದೇಶದಿಂದ ಮರವೂರುಗೆ ಇರುವ ಏಕೈಕ ಸಂಪರ್ಕ ರಸ್ತೆ ಇದಾಗಿದ್ದು. ಕೆಂಜಾರು, ಪೇಜಾವರ, ತೋಕೂರು ಪ್ರದೇಶದಿಂದ ಹಿಂದಿನ ಕಾಲದಲ್ಲಿ ಜನರು ಅನಾರೋಗ್ಯ, ಆಕಸ್ಮಿಕ ಘಟನೆಗಳು ಸಂಭವಿಸಿದ ಸಂದರ್ಭದಲ್ಲಿ ದೋಣಿಯಲ್ಲಿ ಫಲ್ಗುಣಿ ನದಿಯ ಮೂಲಕ ಕುಂಜತ್ತ್ ಬೈಲ್ ಗೆ ಹೋಗಿ ಅಲ್ಲಿಂದ ವಾಹನದ ಮೂಲಕ ಆಸ್ಪತ್ರೆಯನ್ನು ಸಂಬಂಧಿಸಿದ ಸ್ಥಳವನ್ನು ತಲುಪುತ್ತಿದ್ದರು. ಜನರು ಪಡ್ಪು ಪ್ರದೇಶದಿಂದ ಮರವೂರು ಪ್ರದೇಶಕ್ಕೆ ನಡೆಯುತ್ತಾ ಕಾಲುದಾರಿಯ ಮೂಲಕ ನಡೆದುಕೊಂಡು ಬರುತ್ತಿದ್ದರು. ಕ್ರಮೇಣ ಜನರು ವಾಹನಗಳನ್ನು ಖರೀದಿಸುತ್ತ ಬರುತ್ತಿದ್ದಂತೆ, ಜನರಿಗೆ ಆಕಸ್ಮಿಕ, ಅನಾರೋಗ್ಯದ ಸಂದರ್ಭದಲ್ಲಿ ರಸ್ತೆಯ ಅಗತ್ಯತೆಯನ್ನು ಮನಗಂಡು ಆ ಭಾಗದ ಸಂಘಸಂಸ್ಥೆಗಳು ಸುಮಾರು 50 ವರ್ಷಗಳ ಹಿಂದೆ ಶ್ರಮದಾನದ ಮೂಲಕ ಕಚ್ಚಾ ರಸ್ತೆಯನ್ನು ನಿಮಿ೯ಸಿದರು. ಮುಂದೆ ಇದು ಖಾಯಂ ರಸ್ತೆಯಾಗಿ ಮಾರ್ಪಟ್ಟಿತ್ತು.
ನೂರಾರು ವರ್ಷಗಳಿಂದ ಈ ಊರಲ್ಲಿ ವಾಸಿಸುತ್ತಿದ್ದ ಸುಮಾರು ಇನ್ನೂರಕ್ಕೂ ಅಧಿಕ ಕುಟುಂಬಗಳಿಗೆ ಈ ರಸ್ತೆ ಬಹಳ ಉಪಯುಕ್ತವಾಗಿದೆ, ಅಲ್ಲದೆ ಈ ಹಿಂದೆ ಮಂಗಳೂರು ವಿಮಾನ ನಿಲ್ದಾಣ ರಸ್ತೆ, ಮಳವೂರು ಸೇತುವೆ ಬಿರುಕು ಬಿದ್ದ ಸಂದರ್ಭದಲ್ಲಿ ಬಜ್ಪೆ, ಕಟೀಲು, ಕೈಕಂಬ, ಅದ್ಯಪಾಡಿ, ಕರಂಬಾರು, ಕೆಂಜಾರು ಈ ಭಾಗದ ಜನರು ಮಂಗಳೂರು ಹಾಗೂ ಕೂಳೂರು ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ಕೆಲಸಕ್ಕೆ ಹೋಗುವವರಿಗೆ, ಅಲ್ಲದೆ, ಮಂಗಳೂರು, ಕಾವೂರು, ಕೂಳೂರು, ಬೈಕಂಪಾಡಿ ಆ ಭಾಗದ ಜನರು, ಹೊರದೇಶಕ್ಕೆ ಹೋಗುವವರು, ಮಳವೂರು ಸೇತುವೆ ಬಿರುಕು ಬಿಟ್ಟ ಸಂದರ್ಭ ಪಯಾ೯ಯವಾಗಿ ಇದೆ ರಸ್ತೆಯನ್ನು ಬಳಸಿ ವಿಮಾನ ನಿಲ್ದಾಣಕ್ಕೆ ತೆರಳುವಲ್ಲಿ ಈ ರಸ್ತೆ ಬಹಳ ಪ್ರಯೋಜನಕಾರಿಯಾಗಿತ್ತು.
ಆದರೆ, ಇದೇ ರಸ್ತೆಯನ್ನು ಕೋಸ್ಟಲ್ ಗಾಡ್೯ ವಶಪಡಿಸಿಕೊಂಡು ಈ ರಸ್ತೆಯನ್ನು ಮುಚ್ಚಲು ತೆರೆಮರೆಯ ಕಸರತ್ತು ನಡೆಸುತ್ತಿರುವುದು ಜನರನ್ನು ಭೀತಿಗೊಳಿಸಿದೆ. ಮುಂದೆ ಅಲ್ಲಿಯ ನಿವಾಸಿಗಳಿಗೆ ರಸ್ತೆಯೇ ಇಲ್ಲದೆ ಮೂಲಭೂತ ಸೌಕರ್ಯದಿಂದ ವಂಚಿತರಾಗುವುದು ಜಗಜ್ಜಾಹೀರು. ಮುಗ್ಧಜನರು ತಮ್ಮ ನೋವನ್ನು ಪರಿಹರಿಸಿಕೊಳ್ಳಲು ಜನಪ್ರತಿನಿಧಿಗಳ ಹತ್ತಿರ ಹೋದರೆ, ಅವರ ಪ್ರತಿಕ್ರಿಯೆ ವಿಚಿತ್ರವಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ. ಈ ಮಧ್ಯೆ ಕೋಸ್ಟಲ್ ಗಾಡ್೯ ಸಂಸ್ಥೆ ತನ್ನ ಕೆಲಸ ಕಾಯ೯ಗಳನ್ನು ಮಳೆಗಾಲದಲ್ಲಿ ಮುಂದುವರಿಸುತ್ತಾ ರಸ್ತೆ ಉದ್ದಕ್ಕೂ ರಸ್ತೆ ಬದಿಯಲ್ಲಿ ಮಣ್ಣು ತಂದು ರಾಶಿ ಹಾಕಿ, ರಸ್ತೆ ಪೂತಿ೯ ಕೆಸರುಮಯ ಹೊಂಡಮಯವಾಗಲು ಕಾರಣವಾಗಿದೆ.
ಇದರಿಂದಾಗಿ ಈ ಭಾಗದ ಜನರಿಗೆ ದೈನಂದಿಕ ಬದುಕಿಗೆ ತುಂಬಾ ತೊಂದರೆಯಾಗಿದೆ, ಕೆಲಸಕ್ಕೆ ಹೋಗುವ ಆ ಪ್ರದೇಶದ ನಿವಾಸಿಗಳು, ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳ ವಾಹನ, ಆಟೋ, ಅನಾರೋಗ್ಯದಿಂದ ಇರುವವರನ್ನು, ತುತು೯ ಅಗತ್ಯ ಚಿಕಿತ್ಸೆಗಾಗಿ ಅಸ್ಪತ್ರೆಗಳಿಗೆ ಕರೆದುಕೊಂಡು ಹೋಗಲು ಬಹಳ ತೊಂದರೆಯಾಗಿದೆ, ಅದ್ದರಿಂದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಜನರಿಗೆ ಆಗಿರುವ ತೊಂದರೆಯನ್ನು ಅಥ೯ಮಾಡಿಕೊಂಡು ಸದ್ಯಕ್ಕೆ ರಸ್ತೆಯನ್ನು ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು, ಮುಂದೆ ಈ ಭಾಗಕ್ಕೆ ಬದಲಿ ಪರ್ಯಾಯ ರಸ್ತೆಯನ್ನು ಮಾಡುವುದು ಅತಿ ಅನಿವಾರ್ಯ. ಈ ಬಗ್ಗೆ ಸ್ಥಳೀಯ ಶಾಸಕರಾದ ಉಮಾನಾಥ ಕೋಟ್ಯಾನ್, ಸಂಸದರಾದ ಬ್ರಿಜೇಶ್ ಚೌಟ, ಬಜ್ಪೆ ಪಟ್ಟಣ ಪಂಚಾಯತ್ ಅಧ್ಯಕ್ಷರು, ಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪ್ರದೇಶದ ನಿವಾಸಿಗಳಿಗೆ ಸೂಕ್ತ ರಸ್ತೆಯ ವ್ಯವಸ್ಥೆಯನ್ನು ಮಾಡುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
