ದ.ಕ DC ಮನ್ನಾ ಭೂಮಿಗೆ ಸಂಬಂಧಿಸಿದಂತೆ ತಾಲೂಕು ವಾರುಗಳಲ್ಲಿ ಗೊಂದಲ ಸೃಷ್ಟಿಸಲು ಜಿಲ್ಲಾಧಿಕಾರಿಯಿಂದ ಹುನ್ನಾರ : ದಸಂಸ ಆರೋಪ.
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಲಿತರಿಗಾಗಿ ಮೀಸಲಿಟ್ಟಿರುವ ಡಿ. ಸಿ. ಮನ್ನಾ ಜಮೀನು ಅರ್ಹ ಅಭ್ಯರ್ಥಿಗಳಿಗೆ ಹಲವಾರು ವರುಷಗಳಿಂದ ಹಂಚಿಕೆಯಾಗದೆ ಉಳಿದಿದ್ದು, ಈ ನಿಟ್ಟಿನಲ್ಲಿ ದಲಿತರ ಬಹು ವರ್ಷಗಳ ಬೇಡಿಕೆಯನ್ನು ಪರಿಹರಿಸಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಕಳೆದ ಒಂದುವರೆ ವರ್ಷದಿಂದ ಜಿಲ್ಲಾಡಳಿತ ಪರಿಶಿಷ್ಟ ಜಾತಿ - ಪಂಗಡಗಳ ಕುಂದು ಕೊರತೆ ಸಭೆಯನ್ನು ಕರೆಯದೆ ನಿರ್ಲಕ್ಷ್ಯ ವಹಿಸಿತ್ತು. ಈ ಬಗ್ಗೆ ಪೊಲೀಸ್ ಕಮೀಷನರ್ ಸಭೆಯಲ್ಲಿ ದಲಿತ ಮುಖಂಡರುಗಳು ಪ್ರಸ್ತಾಪಿಸಿದ ನಂತರ ಜಿಲ್ಲಾಧಿಕಾರಿಗಳು ಕಳೆದ 10ನೇ ತಾರೀಕಿನಂದು ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆ ಕರೆದು ಆ ಸಭೆಗೆ ತಾನು ಭಾಗವಹಿಸದೆ ಗೈರು ಹಾಜರಾಗಿ ನಿರ್ಲಕ್ಷ್ಯ ವಹಿಸಿರುವುದನ್ನು ದಸಂಸ ಮುಖಂಡರುಗಳು ಆಕ್ಷೇಪಿಸಿ, ಸಭೆಯನ್ನು ಮುಂದೂಡಲಾಗಿತ್ತು.
ಪ್ರಮುಖವಾಗಿ ಡಿಸಿ ಮನ್ನಾ ಭೂಮಿಗೆ ಸಂಬಂಧಿಸಿದಂತೆ ದಲಿತ ಸಂಘಟನೆಗಳ ಪ್ರಶ್ನೆಯಿಂದ ನುಣುಚಿಕೊಳ್ಳುವ ಉದ್ದೇಶದಿಂದ ಜಿಲ್ಲಾಧಿಕಾರಿಗಳು ತಾಲೂಕು ಮಟ್ಟದ ಕುಂದು ಕೊರತೆಯ ಸಭೆಯನ್ನು ಕರೆದು ಡಿಸಿ ಮನ್ನಾ ಭೂಮಿಗೆ ಸಂಬಂಧಿಸಿದಂತೆ ತಾಲೂಕು ವಾರುಗಳಲ್ಲಿ ದಲಿತರ ಒಳಗೆ ಗೊಂದಲ ಸೃಷ್ಟಿಸುವ ಹುನ್ನಾರವನ್ನು ಜಿಲ್ಲಾಡಳಿತ ನಡೆಸುತ್ತಿದೆ ಎಂದು ದಸಂಸ ಆರೋಪಿಸಿದೆ. ಈ ಹುನ್ನಾರಕ್ಕೆ ಜಿಲ್ಲಾಧಿಕಾರಿ ದರ್ಶನ್ ರವರೇ ನೇರ ಹೊಣೆಗಾರರು. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ದಲಿತರು ನೇರ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮನವಿಗಳನ್ನು ಸಲ್ಲಿಸುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಜಿಲ್ಲಾ ಮಟ್ಟದಲ್ಲಿ ಜಿಲ್ಲೆಯ ದಲಿತರ ಸಭೆ ಕರೆದು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಹೊರತು ತಾಲೂಕು ಮಟ್ಟದಲ್ಲಿ ಸಭೆ ಕರೆದು ಈ ಬಗ್ಗೆ ಗೊಂದಲ ಸೃಷ್ಟಿಸಲು ಮುಂದಾಗಿರುವುದು ಖಂಡನೀಯ.
ಕಳೆದ ಸಭೆಯಲ್ಲಿ ಇದೇ ತಿಂಗಳ 20ರಂದು ಜಿಲ್ಲಾಮಟ್ಟದ ಸಭೆ ಕರೆಯುವ ಬಗ್ಗೆ ನಿರ್ಧರಿಸಲಾಗಿತ್ತು. ಆದರೆ ಈ ಸಭೆಯನ್ನು ನಡೆಸದೆ ಏಕಾಏಕಿ ತಾಲೂಕುವಾರು ಸಭೆ ನಡೆಸುವ ತರಾತುರಿ ಏಕೆ? ಎಂದು ದಸಂಸ ಪ್ರಶ್ನಿಸಿದೆ. ಆದುದರಿಂದ ಈ ಕೂಡಲೇ ಜಿಲ್ಲಾಧಿಕಾರಿಗಳು ಜಿಲ್ಲೆಯ ದಲಿತರ ಸಭೆ ಕರೆದು ಡಿ. ಸಿ. ಮನ್ನಾ ಜಮೀನು ಹಂಚಿಕೆಯ ಪ್ರಕ್ರಿಯೆಯನ್ನು ಶೀಘ್ರವಾಗಿ ಪ್ರಾರಂಭಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣ, ಮಂಗಳೂರು ಜಿಲ್ಲಾ ಸಮಿತಿಯು ಆಗ್ರಹಿಸಿದೆ.
