ಪ್ರಾದೇಶಿಕ

ಮಂಗಳೂರು : ದ.ಕ – ಉಡುಪಿ ಜಿಲ್ಲೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪ್ರಮುಖ ಸ್ಥಾಪಕ ಸದಸ್ಯರಾದ ಎಮ್ . ದೇವದಾಸ್ ನಿಧನ: DSS ಭಾವಪೂರ್ಣ ಶ್ರದ್ಧಾಂಜಲಿ.

 

ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಸಾಮಾಜಿಕ ಚಳವಳಿಯ ಮುಖಂಡರು ಹಾಗೂ ಅವಿಭಜಿತ ದ.ಕ – ಉಡುಪಿ ಜಿಲ್ಲೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪ್ರಮುಖ ಸ್ಥಾಪಕ ಸದಸ್ಯರಾದ ಎಮ್. ದೇವದಾಸ್ ನಿಧನಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದೆ.

ಜಿಲ್ಲೆಯಲ್ಲಿ ದಲಿತ ಹೋರಾಟವನ್ನು ಆರಂಭಿಸುವಲ್ಲಿ, ಬಲಪಡಿಸುವಲ್ಲಿ, ಸಂಘಟನೆಯನ್ನು ಕಟ್ಟಿ ಬೆಳೆಸುವಲ್ಲಿ ಹಾಗೂ ಶೋಷಿತ, ದಮನಿತ ಮತ್ತು ವಂಚಿತ ಸಮುದಾಯಗಳ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡಿದ ಹಿರಿಯ ಸಾಮಾಜಿಕ, ದಲಿತ ಮುಖಂಡರು ಹಾಗೂ ನಮ್ಮ ಸಂಘಟನೆಯ ಸ್ಥಾಪಕ ಸದಸ್ಯರ ನಿಧನರಾಗಿರುವುದು ತೀವ್ರ ದುಃಖವನ್ನುಂಟು ಮಾಡಿದೆ.

ಅವರು ಭಗವಾನ್ ಗೌತಮ ಬುದ್ಧರ ಕರುಣೆ, ಸಮಾನತೆ ಮತ್ತು ಮಾನವೀಯತೆಯ ಸಂದೇಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಜೊತೆಗೆ ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ "ಶಿಕ್ಷಣ ಪಡೆಯಿರಿ, ಸಂಘಟಿತರಾಗಿ, ಹೋರಾಡಿ" ಎಂಬ ಸಂದೇಶವನ್ನು ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು, ದಲಿತರು ಹಾಗೂ ಶೋಷಿತ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಸಬಲೀಕರಣಕ್ಕಾಗಿ ಅವಿರತವಾಗಿ ಶ್ರಮಿಸಿದರು.

ಸಂವಿಧಾನದ ಮೌಲ್ಯಗಳು, ಸಾಮಾಜಿಕ ನ್ಯಾಯ, ಸಮಾನತೆ, ಭ್ರಾತೃತ್ವ ಮತ್ತು ಮಾನವ ಘನತೆಯನ್ನು ಎತ್ತಿಹಿಡಿಯುವಲ್ಲಿ ಅವರು ಸದಾ ಮುಂಚೂಣಿಯಲ್ಲಿದ್ದರು. ಅನ್ಯಾಯ, ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯದ, ಕೋಮುವಾದದ ವಿರುದ್ಧ ನಿರ್ಭಯವಾಗಿ ಧ್ವನಿ ಎತ್ತಿ, ಯುವಜನರನ್ನು ಜಾಗೃತಗೊಳಿಸಿ ಸಂಘಟನೆಯ ಬಲವರ್ಧನೆಗೆ ಅಮೂಲ್ಯ ಕೊಡುಗೆ ನೀಡಿದರು.

ಅವರ ಸರಳ ಜೀವನ, ನಿಸ್ವಾರ್ಥ ಸೇವೆ, ಹೋರಾಟದ ಮನೋಭಾವ ಮತ್ತು ಬುದ್ಧಅಂಬೇಡ್ಕರ್ ಅವರ ಆದರ್ಶಗಳ ಮೇಲಿನ ಬದ್ಧತೆ ಮುಂದಿನ ಪೀಳಿಗೆಗೆ ಶಾಶ್ವತ ಸ್ಫೂರ್ತಿಯಾಗಿದೆ. ಅವರ ಅಗಲಿಕೆಯು ಅವರ ಕುಟುಂಬಕ್ಕೆ ಮಾತ್ರವಲ್ಲ, ಸಂಘಟನೆಗೆ, ದಲಿತ ಸಮುದಾಯಕ್ಕೆ ಹಾಗೂ ಜಿಲ್ಲೆಯ ಸಾಮಾಜಿಕ ನ್ಯಾಯದ ಚಳವಳಿಗೆ ತುಂಬಲಾರದ ನಷ್ಟವಾಗಿದೆ.

ಅವರ ಆದರ್ಶಗಳನ್ನು ಮುಂದುವರಿಸಿಕೊಂಡು, ಬುದ್ಧ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಾನತೆ, ನ್ಯಾಯ ಮತ್ತು ಮಾನವೀಯತೆಯ ಸಂದೇಶವನ್ನು ಸಮಾಜದ ಮೂಲೆಮೂಲೆಗೂ ತಲುಪಿಸುವ ಸಂಕಲ್ಪ ಮಾಡೋಣ. ಅದುವೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಮತ್ತು ಅರ್ಥಪೂರ್ಣ ಶ್ರದ್ಧಾಂಜಲಿಯಾಗಿದೆ ಎಂದು ಅಗಲಿದ ಹಿರಿಯ ದಲಿತ ಮುಖಂಡರಾದ ಎಮ್ . ದೇವದಾಸ್ ರವರಿಗೆ ಭಾವಪೂರ್ಣ ಶೃದ್ದಾಂಜಲಿಯನ್ನು ದ.ಸಂಸ. ಜಿಲ್ಲಾ ಸಂಚಾಲಕರಾದ ಸದಾಶಿವ ಪಡುಬಿದ್ರಿ, ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ , ಜಿಲ್ಲಾ ಸಂಚಾಲಕರುಗಳಾದ ರಘು ಕೆ.ಎಕ್ಕಾರ್, ಕೃಷ್ಣಾನಂದ ಡಿ. ಕಮಲಾಕ್ಷ ಬಜಾಲ್, ತಾಲೂಕು ಸಂಚಾಲಕರಾದ ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.