ಕ್ರೈಂ

ಹುಬ್ಬಳ್ಳಿ: 14 ವರ್ಷದ ಅಪ್ರಾಪ್ತ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರಕರಣ; ಕಾಮುಕನ ವಿರುದ್ಧ ಪೋಕ್ಸೋ ಕೇಸ್, ಘಟನೆ ಮುಚ್ಚಿಟ್ಟ 4 ವೈದ್ಯರ ವಿರುದ್ಧವೂ ಎಫ್‌ಐಆರ್!

 



ಹುಬ್ಬಳ್ಳಿ: ಅಪ್ರಾಪ್ತ ವಯಸ್ಸಿನ 14 ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ, ಗರ್ಭಿಣಿಯಾಗಿಸಿ ಹೆಣ್ಣು ಮಗುವಿನ ಜನನಕ್ಕೆ ಕಾರಣನಾದ ಕಾಮುಕನ ವಿರುದ್ಧ ಹುಬ್ಬಳ್ಳಿಯ ಶಹರ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದರ ಜೊತೆಗೆ, ಅಪ್ರಾಪ್ತೆ ಗರ್ಭಿಣಿಯಾಗಿರುವ ಗಂಭೀರ ವಿಷಯ ತಿಳಿದಿದ್ದರೂ ಪೊಲೀಸರಿಗೆ ಮಾಹಿತಿ ನೀಡದೆ ಪ್ರಕರಣವನ್ನು ಮುಚ್ಚಿಡಲು ಯತ್ನಿಸಿದ ನಾಲ್ವರು ವೈದ್ಯರು ಹಾಗೂ ಬಾಲಕಿಯ ಪೋಷಕರ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ.

ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಯಾದ ದೀಪಾ ಜಾವೂರ ಅವರು ನೀಡಿದ ಅಧಿಕೃತ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ:

ಕಳೆದ ವರ್ಷ ಯುವಕನೊಬ್ಬ 14 ವರ್ಷದ ಈ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಮನೆಯೊಂದರಲ್ಲಿ ಬಲವಂತವಾಗಿ ಕೂಡಿಹಾಕಿದ್ದನು. ಆಕೆಯ ಮೇಲೆ ದೌರ್ಜನ್ಯ ಎಸಗಿ ಗರ್ಭಿಣಿಯನ್ನಾಗಿಸಿದ ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಿದ್ದನು. ತದನಂತರ ಬಾಲಕಿ ತನ್ನ ಮನೆಗೆ ಬಂದು ಹೆತ್ತವರಿಗೆ ವಿಷಯ ತಿಳಿಸಿದ್ದಾಳೆ. ವಿಷಯ ತಿಳಿದ ಪೋಷಕರು ಪೊಲೀಸರಿಗೆ ದೂರು ನೀಡುವ ಬದಲು, ಕಲಘಟಗಿ ತಾಲೂಕಿನ ಗ್ರಾಮವೊಂದರ ವೈದ್ಯರೊಬ್ಬರ ಬಳಿ ಕರೆದೊಯ್ದು ತಪಾಸಣೆ ನಡೆಸಿದ್ದರು. ಆ ವೈದ್ಯರ ಸಲಹೆಯ ಮೇರೆಗೆ ಹುಬ್ಬಳ್ಳಿಯ ಖಾಸಗಿ ನರ್ಸಿಂಗ್ ಹೋಮ್‌ಗೂ ತೋರಿಸಲಾಗಿತ್ತು. ಬಾಲಕಿ ಅಪ್ರಾಪ್ತೆಯಾಗಿದ್ದಾಳೆ ಎಂದು ತಿಳಿದಿದ್ದರೂ ಕಲಘಟಗಿಯ ಒಬ್ಬರು ವೈದ್ಯರು ಹಾಗೂ ಹುಬ್ಬಳ್ಳಿ ನರ್ಸಿಂಗ್ ಹೋಮ್‌ನ ಮೂವರು ವೈದ್ಯರು ಈ ಕಾನೂನುಬಾಹಿರ ಘಟನೆಯನ್ನು ಮುಚ್ಚಿಟ್ಟು ಕೇವಲ ಚಿಕಿತ್ಸೆ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮನೆಯಲ್ಲೇ ಹೆರಿಗೆ, ಆಸ್ಪತ್ರೆಗೆ ದಾಖಲು:

ಇದೇ ಜುಲೈ 8 ರಂದು ಬಾಲಕಿ ತನ್ನ ಮನೆಯಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆಯ ನಂತರ ಆಕೆಗೆ ತೀವ್ರ ರಕ್ತಸ್ರಾವ ಉಂಟಾದ ಕಾರಣ ಮೊದಲು ಖಾಸಗಿ ಆಸ್ಪತ್ರೆಗೆ ಹಾಗೂ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಂಸಿ-ಆರ್‌ಐ (KMC-RI) ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಬಾಲಕಿಯ ದಾಖಲೆಗಳನ್ನು ಪರಿಶೀಲಿಸಿದಾಗ ಆಕೆಗೆ ಕೇವಲ 14 ವರ್ಷ 3 ತಿಂಗಳು ವಯಸ್ಸಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಕೆಎಂಸಿ-ಆರ್‌ಐ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರಾಜಶೇಖರ ತಿಳಿಸಿದ್ದಾರೆ.

ಪೊಲೀಸ್ ತನಿಖೆ ಚುರುಕು:

ಹುಬ್ಬಳ್ಳಿ ಶಹರ್ ಠಾಣೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತಲೆಮರೆಸಿಕೊಂಡಿರುವ ಮುಖ್ಯ ಆರೋಪಿಯ ಪತ್ತೆಗಾಗಿ ಜಾಲ ಬೀಸಿದ್ದಾರೆ. ವೈದ್ಯರು ಹಾಗೂ ಪೋಷಕರು ಸೇರಿದಂತೆ ದೂರಿನಲ್ಲಿ ಹೆಸರಿಸಲಾದ ಉಳಿದ ಆರೋಪಿಗಳ ವಿರುದ್ಧ ತನಿಖೆ ಪ್ರಗತಿಯಲ್ಲಿದ್ದು, ಸದ್ಯದವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.