ಸಂತ್ರಸ್ತ ಯುವತಿಗೆ ಒಟ್ಟು 6 ಲಕ್ಷ ರೂಪಾಯಿ ಪರಿಹಾರ ನೀಡಲು ನ್ಯಾಯಾಲಯದ ಆದೇಶ
ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಗುರುಪುರದ ಆಫ್ರಿದಿ
ಮಂಗಳೂರು: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿ, ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೇಮದ ಹೆಸರಲ್ಲಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ ಹಾಗೂ ವಿಡಿಯೋ ತೋರಿಸಿ ಜೀವ ಬೆದರಿಕೆ ಒಡ್ಡಿದ್ದ ಪ್ರಕರಣದ ಆರೋಪಿಗೆ ಮಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯವು (FTSC-2) 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಗುರುಪುರ ಮೂಡೂರು ಕಡೆಯ ಕೆಳಗಿನಕೆರೆಮನೆಯ ನಿವಾಸಿಯಾಗಿರುವ ಕಾರ್ ಚಾಲಕ ಆಫ್ರಿದಿ ಅಲಿಯಾಸ್ ಆಫ್ರಿ (20) ಕಠಿಣ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ.
ಪ್ರೇಮದ ನಾಟಕವಾಡಿ ದೌರ್ಜನ್ಯ:
ಬಂಟ್ವಾಳ ತಾಲೂಕಿನ ನಿವಾಸಿಯಾಗಿದ್ದ 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಫ್ಯಾಷನ್ ಡಿಸೈನಿಂಗ್ ಕಲಿಯುತ್ತಿದ್ದಾಗ ಆಕೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಆಫ್ರಿದಿ ಪರಿಚಯವಾಗಿದ್ದ. ಬಾಲಕಿಯೊಂದಿಗೆ ಗೆಳೆತನ ಬೆಳೆಸಿದ್ದ ಆರೋಪಿ, ತದನಂತರ ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಪ್ರೀತಿಸುವ ನಾಟಕವಾಡಿದ್ದ. 2024ರ ಮೇ 27ರಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಬಾಲಕಿ ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭವನ್ನು ಬಳಸಿಕೊಂಡ ಆರೋಪಿ, ಆಕೆಯ ಬಾಡಿಗೆ ಮನೆಗೆ ನುಗ್ಗಿ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಅಷ್ಟೇ ಅಲ್ಲದೆ, ಈ ಕೃತ್ಯದ ದೃಶ್ಯಾವಳಿಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದ ಆರೋಪಿ, ಮುಂದೆ ತನಗೆ ದೈಹಿಕ ಸಂಪರ್ಕಕ್ಕೆ ಒಪ್ಪದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಮತ್ತು ಜೀವಸಹಿತ ಬಿಡುವುದಿಲ್ಲ ಎಂದು ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಿ ದೌರ್ಜನ್ಯ ಮುಂದುವರಿಸಿದ್ದ.
ತಲೆಮರೆಸಿಕೊಂಡರೂ ಬೆನ್ನಟ್ಟಿದ ಕಾಟ:
ಆರೋಪಿಯ ನಿರಂತರ ಕಿರುಕುಳ ಹಾಗೂ ಹೆದರಿಕೆಯಿಂದಾಗಿ ಬಾಲಕಿಯ ಪೋಷಕರು 2025ರ ಜೂನ್ 1ರಂದು ಬಂಟ್ವಾಳದಿಂದ ಬೆಳ್ತಂಗಡಿ ತಾಲೂಕಿಗೆ ತಮ್ಮ ಬಾಡಿಗೆ ಮನೆಯನ್ನು ಬದಲಾಯಿಸಿದ್ದರು. ಆದರೆ ಈ ಹೊಸ ವಿಳಾಸವನ್ನೂ ಪತ್ತೆ ಹಚ್ಚಿದ ಕಾಮುಕ ಆಫ್ರಿದಿ, 2025ರ ಆಗಸ್ಟ್ 6ರಂದು ಬೆಳ್ತಂಗಡಿಯ ಮನೆಗೂ ನುಗ್ಗಿ ಮತ್ತೆ ದೌರ್ಜನ್ಯ ಎಸಗಿದ್ದ. ತದನಂತರ ಬಾಲಕಿಯಿಂದ ದೂರ ಸರಿದಿದ್ದ ಆರೋಪಿಯನ್ನು ಆಗಸ್ಟ್ 30ರಂದು ಬಾಲಕಿ ಪ್ರಶ್ನಿಸಿದಾಗ, ಆಕೆಯನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿ ನಯವಂಚನೆ ಮಾಡಿದ್ದ.
ನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿ:
ಆರೋಪಿಯ ವಂಚನೆಯಿಂದ ತೀವ್ರ ಮಾನಸಿಕ ಆಘಾತಕ್ಕೊಳಗಾದ ಬಾಲಕಿ, ತನ್ನ ಮನೆಯಲ್ಲಿ ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಳು. ತಕ್ಷಣವೇ ಆಕೆಯನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ಘಟನೆಯ ನಂತರ ಬಾಲಕಿಯ ಪೋಷಕರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ಕೋರ್ಟ್ ವಿಧಿಸಿದ ಶಿಕ್ಷೆಯ ವಿವರಗಳು:
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಎಫ್‌ಟಎಸ್‌ಸಿ-2 ಪೋಕ್ಸೋ ಕೋರ್ಟ್‌ನ ನ್ಯಾಯಾಧೀಶರಾದ ಕೆ.ಎಸ್. ಮಾನು ಅವರು ಆರೋಪಿಯ ಮೇಲಿನ ಎಲ್ಲಾ ಅಪರಾಧಗಳು ಸಾಬೀತಾಗಿವೆ ಎಂದು ತೀರ್ಪು ನೀಡಿದ್ದಾರೆ.
ಪೋಕ್ಸೋ ಕಾಯ್ದೆಯಡಿ: ಅಪರಾಧಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ 4 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸಬೇಕು.
IPC 506 (ಜೀವ ಬೆದರಿಕೆ) ಅಡಿ: 3 ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ ವಿಧಿಸಲಾಗಿದ್ದು, ದಂಡ ಕಟ್ಟದಿದ್ದರೆ 15 ದಿನಗಳ ಸಾದಾ ಶಿಕ್ಷೆ ವಿಧಿಸಲಾಗಿದೆ. ಈ ಎರಡೂ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸಲು ಕೋರ್ಟ್ ಆದೇಶಿಸಿದೆ.
ಸಂತ್ರಸ್ತೆಗೆ ₹6 ಲಕ್ಷ ಪರಿಹಾರಧನ:
ನ್ಯಾಯಾಲಯವು ಭೇದ ನೊಂದ ಬಾಲಕಿಗೆ ಒಟ್ಟು 6 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆದೇಶಿಸಿದೆ.
ಈ ಇಡೀ ಪ್ರಕರಣದ ತನಿಖೆ ನಡೆಸಿ ಕೋರ್ಟ್‌ಗೆ ಪಕ್ಕಾ ದೋಷಾರೋಪಣೆ ಪಟ್ಟಿ ಸಲ್ಲಿಸುವಲ್ಲಿ ಬೆಳ್ತಂಗಡಿ ಠಾಣೆಯ ಇನ್‌ಸ್ಪೆಕ್ಟರ್ ರವಿ ಬಿ.ಎಸ್. ಶ್ರಮಿಸಿದ್ದರು. ನ್ಯಾಯಾಲಯದಲ್ಲಿ ಸಂತ್ರಸ್ತೆಯ ಪರವಾಗಿ ಪೋಕ್ಸೋ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ಅವರು ವಾದ ಮಂಡಿಸಿದ್ದರು.
