ಕ್ರೈಂ

ಮಂಗಳೂರು: ಪ್ರೀತಿ ಹೆಸರಲ್ಲಿ ವಂಚಿಸಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ, ನಗ್ನ ಚಿತ್ರ ತೋರಿಸಿ ಬೆದರಿಕೆ; ಕಾಮುಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

 




ಮಂಗಳೂರು: ಪ್ರೀತಿಯ ನೆಪದಲ್ಲಿ ಅಪ್ರಾಪ್ತ ಬಾಲಕಿಯ ಮನವೊಲಿಸಿ, ಆಕೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಲ್ಲದೆ, ಸ್ನಾನದ ಕೋಣೆಯ ನಗ್ನ ವೀಡಿಯೋ ಸ್ಕ್ರೀನ್ ಶಾಟ್ ತೆಗೆದು ಜೀವ ಬೆದರಿಕೆ ಒಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಎಫ್‌ಟಿಎಸ್‌ಸಿ-2 (FTSC-2) ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕಠಿಣ ತೀರ್ಪು ಪ್ರಕಟಿಸಿದೆ.


 ಕೃತ್ಯ ಎಸಗಿದ ಆರೋಪಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಧೀಶರಾದ ಮಾನು ಕೆ.ಎಸ್. ಅವರು ಆದೇಶಿಸಿದ್ದಾರೆ.

ಮಂಗಳೂರು ತಾಲೂಕಿನ ಕುಂಜತ್ತಬೈಲ್ ದೇವಿ ನಗರ ನಿವಾಸಿ ಸೋನು ಮ್ಯಾಕ್ಲಿನ್ ನೊರೊನ್ಹ (20) ಜೈಲು ಶಿಕ್ಷೆಗೆ ಗುರಿಯಾದ ಅಪರಾಧಿ.

ಪ್ರಕರಣದ ವಿವರ:

ಅಪರಾಧಿ ಸೋನು ಮ್ಯಾಕ್ಲಿನ್ ನೊರೊನ್ಹ, 2024ರ ಫೆಬ್ರವರಿ ತಿಂಗಳಿನಿಂದ ನೊಂದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ ಆಕೆಯ ಮನವೊಲಿಸಿದ್ದ. ಬಳಿಕ 2024ರ ಸೆಪ್ಟೆಂಬರ್‌ನಲ್ಲಿ ಬಾಲಕಿ ಶಕ್ತಿನಗರದ ಬಾಡಿಗೆ ಮನೆಯಲ್ಲಿದ್ದಾಗ ಹಾಗೂ 2024ರ ನವೆಂಬರ್‌ನಿಂದ 2025ರ ಜೂನ್ ತಿಂಗಳ ಮಧ್ಯೆ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದ.

ಅಷ್ಟಕ್ಕೇ ನಿಲ್ಲದೆ, ಬಾಲಕಿ ಸ್ನಾನಗೃಹದಲ್ಲಿ ನಗ್ನ ಸ್ಥಿತಿಯಲ್ಲಿದ್ದಾಗ ವೀಡಿಯೋ ಕಾಲ್ ಮಾಡಿ, ಅದನ್ನು ಸ್ಕ್ರೀನ್ ಶಾಟ್ ಮಾಡಿ ತನ್ನ ಮೊಬೈಲ್‌ನಲ್ಲಿ ನಗ್ನ ಚಿತ್ರಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ. ಮುಂದೆ ತನ್ನೊಂದಿಗೆ ದೈಹಿಕ ಸಂಪರ್ಕಕ್ಕೆ ಬರದಿದ್ದರೆ ಈ ನಗ್ನ ಚಿತ್ರಗಳನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದ. ಜೊತೆಗೆ ಬಾಲಕಿ, ಆಕೆಯ ತಾಯಿ ಹಾಗೂ ಅಕ್ಕನನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆಯನ್ನೂ ಹಾಕಿದ್ದ.

ತನಿಖೆ ಹಾಗೂ ವಿಧಿಸಲಾದ ಶಿಕ್ಷೆಯ ವಿವರ:

ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ (ಅ.ಕ್ರ. 130/2025) ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ಡಿ. ನಾಗರಾಜ್ ಅವರು ಪ್ರಬಲ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾ ದೇವಿ ಅವರು ಪರಿಣಾಮಕಾರಿಯಾಗಿ ವಾದ ಮಂಡಿಸಿದ್ದರು.

ಆರೋಪಿಯ ಮೇಲಿನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಕೆಳಗಿನಂತೆ ಶಿಕ್ಷೆ ವಿಧಿಸಿದೆ:

ಪೋಕ್ಸೋ ಕಾಯ್ದೆಯ ಕಲಂ 6 ಮತ್ತು ಬಿಎನ್‌ಎಸ್ (BNS) ಕಲಂ 64 (2)(m): 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 50,000 ರೂ. ದಂಡ.

ಬಿಎನ್‌ಎಸ್ (BNS) ಕಲಂ 77: 1 ವರ್ಷ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ.

ಪೋಕ್ಸೋ ಕಾಯ್ದೆಯ ಕಲಂ 15: 1 ವರ್ಷ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ.

ಐಟಿ ಆಕ್ಟ್ (IT Act) ಕಲಂ 66 (E): 1 ವರ್ಷ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ.