ಕ್ರೈಂ

ಬಂಟ್ವಾಳ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ 52 ವರ್ಷದ ಕಾಮುಕನಿಗೆ ಎರಡೂವರೆ ವರ್ಷ ಜೈಲು, ₹40 ಸಾವಿರ ದಂಡ!



ಬಂಟ್ವಾಳ/ಮಂಗಳೂರು: ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಪ್ರಕರಣದಲ್ಲಿ 52 ವರ್ಷದ ಆರೋಪಿಗೆ 2 ವರ್ಷ 6 ತಿಂಗಳು ಕಠಿಣ ಜೈಲು ಶಿಕ್ಷೆ ಹಾಗೂ ₹40,000 ದಂಡ ವಿಧಿಸಿ ಮಂಗಳೂರಿನ ಎಫ್‌ಟಿಎಸ್‌ಸಿ-1 (FTSC-I) ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಮಣಿನಾಲ್ಕೂರು ನಿವಾಸಿ ಮೋನಪ್ಪ ನಾಯ್ಕ (52) ಶಿಕ್ಷೆಗೆ ಗುರಿಯಾದ ಅಪರಾಧಿ.

ಪ್ರಕರಣದ ಹಿನ್ನೆಲೆ:

2025ರ ಜೂನ್ 23ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಮಾನವೀಯ ಘಟನೆ ನಡೆದಿತ್ತು. ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪೋಕ್ಸೋ (POCSO) ಮತ್ತು ಬಿಎನ್‌ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಘಟನೆ ನಡೆದ ಬಳಿಕ ಪ್ರಕರಣದ ತನಿಖೆ ಕೈಗೊಂಡ ಅಂದಿನ ತನಿಖಾಧಿಕಾರಿಗಳಾದ ಪಿಎಸ್ಐ ಕೀರಪ್ಪ ಘಟಕಾಂಬಳೆ ಹಾಗೂ ಪಿಎಸ್ಐ ಕೃಷ್ಣಕಾಂತ ಪಾಟೀಲ್ ಅವರು ಆರೋಪಿಯ ವಿರುದ್ಧ ಎಲ್ಲಾ ಪೂರಕ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು.

ನ್ಯಾಯಾಲಯದ ತೀರ್ಪು ಮತ್ತು ಶಿಕ್ಷೆಯ ವಿವರ:

ಮಂಗಳೂರಿನ ಎಫ್‌ಟಿಎಸ್‌ಸಿ-1 ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಮಾನ್ಯ ನ್ಯಾಯಾಧೀಶರಾದ ಮೋಹನ್‌ ಜೆ.ಎಸ್ ಅವರು ಆರೋಪಿಯ ಮೇಲಿನ ಅಪರಾಧ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ.

ವಿಧಿಸಲಾದ ಶಿಕ್ಷೆಗಳು:

BNS ಕಾಯ್ದೆ ಸೆಕ್ಷನ್ 74 r/w 62: 2 ವರ್ಷ 6 ತಿಂಗಳು ಜೈಲು ಹಾಗೂ ₹15,000 ದಂಡ.

BNS ಕಾಯ್ದೆ ಸೆಕ್ಷನ್ 75 (2)(3) r/w 62: 1 ವರ್ಷ ಜೈಲು ಹಾಗೂ ₹10,000 ದಂಡ.

BNS ಕಾಯ್ದೆ ಸೆಕ್ಷನ್ 79: 1 ವರ್ಷ ಜೈಲು ಹಾಗೂ ₹5,000 ದಂಡ.

ಪೋಕ್ಸೋ ಕಾಯ್ದೆ ಸೆಕ್ಷನ್ 12 r/w 18: 1 ವರ್ಷ ಜೈಲು ಹಾಗೂ ₹10,000 ದಂಡ.

ಎಲ್ಲಾ ಶಿಕ್ಷೆಗಳನ್ನು ಏಕಕಾಲದಲ್ಲಿ (Concurrently) ಅನುಭವಿಸಬೇಕಾಗಿರುವುದರಿಂದ, ಅಪರಾಧಿ ಮೋನಪ್ಪ ನಾಯ್ಕ ಒಟ್ಟು 2 ವರ್ಷ 6 ತಿಂಗಳುಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಿದ್ದು, ₹40,000 ದಂಡ ಪಾವತಿಸಬೇಕಾಗಿದೆ.

ಪ್ರಕರಣದಲ್ಲಿ ಸರ್ಕಾರದ ಪರವಾಗಿ ಅಭಿಯೋಜಕಿ ಸಹನಾದೇವಿ ಅವರು  ವಾದ ಮಂಡಿಸಿದ್ದರು.