ಕ್ರೈಂ

12 ವರ್ಷಗಳ ಹಳೆಯ ಹತ್ಯೆ ಪ್ರಕರಣದಲ್ಲಿ ತೀರ್ಪು: ಮಂಗಳೂರಿನ ಮೀನುಗಾರ ಮುಖಂಡ ಗಂಗಾಧರ ಪಾಂಗಳ ಕೊಲೆಗಾರರಿಗೆ ಜೀವಾವಧಿ ಶಿಕ್ಷೆ

 



ಮಂಗಳೂರು: ಕರಾವಳಿಯಲ್ಲಿ ಭಾರಿ ಸಂಚಲನ ಮೂಡಿಸಿದ್ದ ಮೀನುಗಾರಿಕಾ ಮುಖಂಡ ಗಂಗಾಧರ ಪಾಂಗಳ (55) ಅವರ ಅಪಘಾತ ಸೃಷ್ಟಿಸಿ ಭೀಕರ ಕೊಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ನಾಲ್ವರು ಪ್ರಮುಖ ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಶಿಕ್ಷೆಗೆ ಗುರಿಯಾದ ಆರೋಪಿಗಳು:

  1. ಸತೀಶ್ ಬೈಕಂಪಾಡಿ (58)
  2. ಹರೀಶ್ ಬೈಕಂಪಾಡಿ (60)
  3. ಭಾಸ್ಕರ್ ಬೈಕಂಪಾಡಿ (61)
  4. ಪುಷ್ಪರಾಜ್ (47)

. ಹತ್ಯೆಯ ಹಿನ್ನೆಲೆಆಡಳಿತಾತ್ಮಕ ದ್ವೇಷವೇ ಕಾರಣ:

ಬೈಕಂಪಾಡಿಯ ಮೊಗವೀರ ಮಹಾಸಭಾದ ಅಧ್ಯಕ್ಷರಾಗಿದ್ದ ಸತೀಶ್ ಬೈಕಂಪಾಡಿ, ಮೀನಕಳಿಯದ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಹಾಗೂ ಸ್ಥಳೀಯ ಪ್ರೌಢಶಾಲೆ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷತೆಯನ್ನೂ ವಹಿಸಿದ್ದರು. ಕಾಮಗಾರಿಗಳ ವಂತಿಗೆ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿ ಸತೀಶ್ ಹಾಗೂ ಭಾಸ್ಕರ್ ಅವರನ್ನು ಮೊಗವೀರ ಮಹಾಸಭಾದ ಸದಸ್ಯತ್ವದಿಂದ ಅಮಾನತುಗೊಳಿಸಲು ಗಂಗಾಧರ ಪಾಂಗಳ ಪ್ರಮುಖ ಕಾರಣರಾಗಿದ್ದರು. ವೈಷಮ್ಯ ಮನಸ್ಸಿನಲ್ಲಿಟ್ಟುಕೊಂಡ ಆರೋಪಿಗಳು ಪಾಂಗಳ ಅವರನ್ನು ಮುಗಿಸಲು ಸಂಚು ರೂಪಿಸಿದ್ದರು.

ನಕಲಿ ಅಪಘಾತ ಸೃಷ್ಟಿಸಿ ಭೀಕರ ಕೊಲೆ:

2014 ಮೇ ತಿಂಗಳಲ್ಲಿ ಬೈಕಂಪಾಡಿ-ಮೀನಕಳಿಯ ರಸ್ತೆಯ ಗೋಡೌನ್ ಬಳಿ ಸತೀಶ್, ಭಾಸ್ಕರ್, ಹರೀಶ್ ಹಾಗೂ ಪುಷ್ಪರಾಜ್ ಒಂದಾಗಿ ಗಂಗಾಧರ ಪಾಂಗಳ ಅವರ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಗಂಗಾಧರ ಅವರು ಸ್ಕೂಟರ್ನಲ್ಲಿ ಪ್ರಯಾಣಿಸುತ್ತಿದ್ದಾಗ, ಆರೋಪಿ ಪುಷ್ಪರಾಜ್ ತನ್ನ ಕಾರಿನಿಂದ ಹಿಂಬದಿಯಿಂದ ಭೀಕರವಾಗಿ ಢಿಕ್ಕಿ ಹೊಡೆಸಿ ಹತ್ಯೆಗೈದಿದ್ದ. ಪಾಂಗಳ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಳ್ಳಲು ಇತರ ಮೂವರು ಆರೋಪಿಗಳು ಪ್ರತ್ಯೇಕ ಎರಡು ಕಾರುಗಳಲ್ಲಿ ಹಿಂಬಾಲಿಸಿ ಬಂದಿದ್ದರು.

ಬಳಿಕ ಕೃತ್ಯಕ್ಕೆ ಬಳಸಿದ್ದ ಕಾರನ್ನು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಅತ್ತಾವರದ ಗ್ಯಾರೇಜೊಂದರಲ್ಲಿ ಸುಳ್ಳು ನೆಪ ಹೇಳಿ ರಿಪೇರಿಗೆ ನೀಡಲಾಗಿತ್ತು. ಆರಂಭದಲ್ಲಿ ಇದನ್ನು ಸಾಮಾನ್ಯ ರಸ್ತೆ ಅಪಘಾತವೆಂದು ಭಾವಿಸಲಾಗಿದ್ದರೂ, ತನಿಖೆ ವೇಳೆ ಇದು ಪೂರ್ವನಿಯೋಜಿತ ಹತ್ಯೆ ಎಂಬುದು ಬಯಲಾಗಿತ್ತು.

ಕಠಿಣ ಶಿಕ್ಷೆ ಮತ್ತು ದಂಡದ ವಿವರ:

ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಜಗದೀಶ ವಿ.ಎನ್. ಅವರು ಸುದೀರ್ಘ ವಿಚಾರಣೆ ನಡೆಸಿ, ಜುಲೈ 21 ರಂದು ಆರೋಪಿಗಳನ್ನು ಅಪರಾಧಿಗಳೆಂದು ಆದೇಶಿಸಿ, ಜುಲೈ 27 ರಂದು ಶಿಕ್ಷೆಯ ಪ್ರಮಾಣ ಘೋಷಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ಅವರು ಸರ್ಕಾರದ ಪರವಾಗಿ ಸಮರ್ಥ ವಾದ ಮಂಡಿಸಿದ್ದರು.

  • ಜೀವಾವಧಿ ಶಿಕ್ಷೆ: ಅಪರಾಧಿಗಳಾದ ಸತೀಶ್, ಹರೀಶ್, ಭಾಸ್ಕರ್ ಮತ್ತು ಪುಷ್ಪರಾಜ್ಗೆ ಭಾರತೀಯ ದಂಡ ಸಂಹಿತೆಯ (IPC) ವಿವಿಧ ಕಲಂಗಳಡಿಯಲ್ಲಿ ಜೀವಾವಧಿ ಸಜೆ ಹಾಗೂ ತಲಾ ₹15,000 ದಂಡ ವಿಧಿಸಲಾಗಿದೆ. ದಂಡ ತೆರಲು ತಪ್ಪಿದರೆ ಹೆಚ್ಚುವರಿ 1 ವರ್ಷ ಸಾದಾ ಶಿಕ್ಷೆ ಅನುಭವಿಸಬೇಕಾಗುತ್ತದೆ.
  • ಸಾಕ್ಷ್ಯ ನಾಶಕ್ಕೆ ಪ್ರತ್ಯೇಕ ಶಿಕ್ಷೆ: ಸಾಕ್ಷ್ಯ ನಾಶಪಡಿಸಿದ ಅಪರಾಧಕ್ಕಾಗಿ (ಕಲಂ 201) ನಾಲ್ವರಿಗೂ 2 ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ ತಲಾ ₹1,000 ದಂಡ ವಿಧಿಸಲಾಗಿದೆ.
  • ಸಂತ್ರಸ್ತೆಯ ಪರಿಹಾರ: ವಸೂಲಾಗುವ ಒಟ್ಟು ₹64,000 ದಂಡದ ಮೊತ್ತದಲ್ಲಿ ₹50,000 ಅನ್ನು ಮೃತ ಗಂಗಾಧರ ಪಾಂಗಳ ಅವರ ಮಗಳಿಗೆ ನೀಡಬೇಕು ಹಾಗೂ ಉಳಿದ ₹14,000 ಮೊತ್ತವನ್ನು ಸರ್ಕಾರಕ್ಕೆ ಜಮಾ ಮಾಡಲು ಕೋರ್ಟ್ ಆದೇಶಿಸಿದೆ.

11 ವರ್ಷ ತಡೆಯಾಜ್ಞೆ ತಂದಿದ್ದ ಆರೋಪಿಗಳು:

ಕೊಲೆ ನಡೆಸಿದ ಬಳಿಕ ಆರೋಪಿ ಸತೀಶ್ ಬೈಕಂಪಾಡಿ 6 ತಿಂಗಳುಗಳ ಕಾಲ ತಲೆಮರೆಸಿಕೊಂಡಿದ್ದ. ತದನಂತರ ಆರೋಪಿಗಳು ಜಿಲ್ಲಾ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ನಿಂದ ತಡೆಯಾಜ್ಞೆ (Stay) ತಂದಿದ್ದರಿಂದ 2025ರವರೆಗೂ ಪ್ರಕರಣದ ವಿಚಾರಣೆ ವಿಳಂಬವಾಗಿತ್ತು. ಕೊನೆಗೂ 12 ವರ್ಷಗಳ ಸುದೀರ್ಘ ಹೋರಾಟದ ನಂತರ ಮೃತರ ಕುಟುಂಬಕ್ಕೆ ನ್ಯಾಯ ಸಿಕ್ಕಂತಾಗಿದೆ.

ಪಣಂಬೂರು ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಅಂದಿನ ಇನ್ಸ್ಪೆಕ್ಟರ್ ಎನ್.ಆರ್. ಮುಕ್ರಿ ಪ್ರಾಥಮಿಕ ತನಿಖೆ ನಡೆಸಿದ್ದು, ಬಳಿಕ ರವೀಶ್ ನಾಯಕ್ ಮತ್ತು ಭಾಸ್ಕರ ರೈ ತನಿಖೆ ಪೂರ್ಣಗೊಳಿಸಿ, ಪೊಲೀಸ್ ಅಧಿಕಾರಿ ಲೋಕೇಶ್ ಕೋರ್ಟ್ಗೆ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಿದ್ದರು.