ಕ್ರೈಂ

ಲಾವಣ್ಯ ಕೊಲೆ ಕೇಸ್ ತನಿಖೆ ನಡುವೆ ಫೋಟೋ ತಿರುಚಿದ ಕಿಡಿಗೇಡಿಗಳು: ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ; ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ವಾಟ್ಸ್ಆಪ್ ಗ್ರೂಪ್‌ಗಳ ವಿರುದ್ಧ ಖಾಕಿ ತೀವ್ರ ಕ್ರಮ!

 






ಬಂಟ್ವಾಳ:  ಬಿಸಿ ರೋಡ್‌ನ ಲಾವಣ್ಯ ಹತ್ಯೆ ಪ್ರಕರಣವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕ ಶಾಂತಿ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರಲು ಯತ್ನಿಸಿದ ಜಾಲಗಳಿಗೆ ಬಂಟ್ವಾಳ ನಗರ ಪೊಲೀಸರು ಶಾಕ್ ನೀಡಿದ್ದಾರೆ.


 ಪ್ರಕರಣದ ಆರೋಪಿಯ ಮೂಲ ಭಾವಚಿತ್ರವನ್ನು ತಮಗಿಷ್ಟ ಬಂದಂತೆ ಎಡಿಟ್ ಮಾಡಿ, ರಾಜಕೀಯ ಪಕ್ಷ ಹಾಗೂ ಸಂಘಟನೆಗಳಿಗೆ ಲಿಂಕ್ ಕಲ್ಪಿಸಿ ಅಪಪ್ರಚಾರ ಮಾಡುತ್ತಿದ್ದ ವಿವಿಧ ವಾಟ್ಸ್ಆಪ್ ಗ್ರೂಪ್‌ಗಳು, ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಖಾತೆಗಳ ವಿರುದ್ಧ ಒಟ್ಟು ಮೂರು   ಮೊಕದ್ದಮೆಗಳನ್ನು ದಾಖಲಿಸಲಾಗಿದೆ.



ಲಾವಣ್ಯ ಹತ್ಯೆಯ ತನಿಖೆಯು ಪ್ರಗತಿ ಹಂತದಲ್ಲಿರುವಾಗಲೇ ಕೆಲವು ಕಿಡಿಗೇಡಿಗಳು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು ಸುಳ್ಳು ವದಂತಿ ಹಾಗೂ ದ್ವೇಷಪೂರಿತ ಬರಹಗಳನ್ನು ಹರಿಬಿಡುತ್ತಿದ್ದರು. ಪರಿಸ್ಥಿತಿಯ ಗಾಂಭೀರ್ಯತೆಯನ್ನು ಅರಿತ ಪೊಲೀಸ್ ಇಲಾಖೆ ತಕ್ಷಣವೇ ಕಾರ್ಯಪ್ರವೃತ್ತರಾಗಿ ಕೈಗೊಂಡಿರುವ ಶಿಸ್ತು ಕ್ರಮಗಳ ವಿವರ ಇಲ್ಲಿದೆ:


ಸಂಘಟನೆಯ ಬಣ್ಣ ಬಳಿದು ಸುಳ್ಳು ಪೋಸ್ಟ್: ಸರಣಿ ವಾಟ್ಸ್ಆಪ್ ಗ್ರೂಪ್, ಇನ್‌ಸ್ಟಾಗ್ರಾಂ ಖಾತೆಗೆ ಸಂಕಷ್ಟ

ಹಂತಕನ ಫೋಟೋಗೆ ಡಿಜಿಟಲ್ ಎಡಿಟಿಂಗ್ ಮೂಲಕ ಕೇಸರಿ ಶಾಲು ಹಾಗೂ ಕುಂಕುಮವನ್ನು ಇಟ್ಟು, ಆತನನ್ನು ಭಜರಂಗದಳದ ಸಕ್ರಿಯ ಕಾರ್ಯಕರ್ತ ಎಂದು ಸುಳ್ಳಾಗಿ ಬಿಂಬಿಸಲಾಗಿತ್ತು. ಸಮಾಜದಲ್ಲಿ ಒಡಕು ಮೂಡಿಸುವ ಇಂತಹ ಪೋಸ್ಟ್‌ಗಳನ್ನು ಪ್ರಸಾರ ಮಾಡಿದ ಆರೋಪದಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 196 ಹಾಗೂ 353(2) ರ ಪ್ರಕಾರ ಪ್ರಥಮ ಮಾಹಿತಿ ವರದಿ (ಅ.ಕ್ರ: 96/2026) ದಾಖಲಿಸಿಕೊಳ್ಳಲಾಗಿದೆ.

troll_master.__ (ಇನ್‌ಸ್ಟಾಗ್ರಾಂ ಪೇಜ್)

Yuva Belthangady (ವಾಟ್ಸ್ಆಪ್ ಗ್ರೂಪ್)

PPadmaraj Padmarajpari (ವಾಟ್ಸ್ಆಪ್ ಗ್ರೂಪ್)

Padmaraj Padmaraj pari (ವಾಟ್ಸ್ಆಪ್ ಗ್ರೂಪ್)

Yuva CongressBelthangady (ವಾಟ್ಸ್ಆಪ್ ಗ್ರೂಪ್)

Facts and Justice (ವಾಟ್ಸ್ಆಪ್ ಗ್ರೂಪ್)


ಫೇಸ್‌ಬುಕ್‌ನಲ್ಲಿ ಶಾಂತಿ ಕದಡುವ ಬರಹ: ಮಹಿಳೆ ವಿರುದ್ಧ ಪ್ರಕರಣ

ಸಾರ್ವಜನಿಕ ಕಾನೂನು ಸುವ್ಯವಸ್ಥೆ ಮತ್ತು ನೆಮ್ಮದಿಗೆ ಭಂಗ ತರುವ ಉದ್ದೇಶದಿಂದ ಫೇಸ್‌ಬುಕ್ ಜಾಲತಾಣದಲ್ಲಿ ಆಧಾರರಹಿತ ಸುಳ್ಳು ಪೋಸ್ಟ್‌ಗಳನ್ನು ಪ್ರಕಟಿಸಿದ್ದಕ್ಕಾಗಿ ಶೈಲಜಾ ಅಮರನಾಥ್ (Shailaja Amarnath) ಎಂಬುವವರ ಫೇಸ್‌ಬುಕ್ ಪ್ರೊಫೈಲ್ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಎರಡನೇ ಮೊಕದ್ದಮೆ (ಅ.ಕ್ರ: 97/2026 ಕಲಂ: 353(2) BNS) ರಿಜಿಸ್ಟರ್ ಆಗಿದೆ.


ಆರೋಪಿಗೆ ಕಾಂಗ್ರೆಸ್ ಲೇಬಲ್ ಅಂಟಿಸಿದ ಖಾತೆಯೂ ಲಾಕ್!

ಇದೇ ಪ್ರಕರಣದ ಮತ್ತೊಂದು ಮಖಾಮುಖಿಯಲ್ಲಿ, ಆರೋಪಿಯು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದಾನೆ ಎಂದು ಆತನ ಫೋಟೋವನ್ನು ರಾಜಕೀಯವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ಬಿತ್ತಲಾಗಿತ್ತು. ರಾಜಕೀಯ ಲಾಭಕ್ಕಾಗಿ ಮತ್ತು ದಾರಿ ತಪ್ಪಿಸುವ ಪೋಸ್ಟ್ ಹಂಚಿಕೊಂಡ ಹಿನ್ನೆಲೆಯಲ್ಲಿ ಚೇತನ್ ಬೆಲ್ಚಡ (Chethan Belchada) ಎಂಬುವವರ ಫೇಸ್‌ಬುಕ್ ಖಾತೆಯ ವಿರುದ್ಧ ಪೊಲೀಸರು ಮೂರನೇ ಕಾನೂನು ಕ್ರಮ ಜರುಗಿಸಿದ್ದಾರೆ (ಅ.ಕ್ರ: 98/2026 ಕಲಂ: 353(2) BNS).