ಪ್ರಾದೇಶಿಕ

ಅಕ್ಕಗೆ ವಾಟ್ಸಪ್ ವಾಯ್ಸ್ ಮೆಸೇಜ್ ಕಳುಹಿಸಿ ಮೂಡುಬಿದಿರೆಯಲ್ಲಿ ಯುವಕ ಆತ್ಮಹತ್ಯೆ!



ಮೂಡುಬಿದಿರೆ: ಕೌಟುಂಬಿಕ ಕಲಹದಿಂದ ಮನನೊಂದ ಯುವಕನೊಬ್ಬ ತನ್ನ ಅಕ್ಕನಿಗೆ ವಾಟ್ಸಪ್‌ನಲ್ಲಿ ಧ್ವನಿ ಸಂದೇಶ (Voice Message) ಕಳುಹಿಸಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಳುವಾಯಿ ಗ್ರಾಮದ ನಾಣಿಲ್‌ನಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.


ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಬೆಳ್ತಂಗಡಿ ತಾಲೂಕಿನ ಕಾಜೂರು ಮೂಲದ ಸಯ್ಯದ್ ಅನ್ವರ್ (25) ಎಂದು ಗುರುತಿಸಲಾಗಿದ್ದು, ಘಟನೆ ಕುರಿತು ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಅವರು ಪ್ರಾಥಮಿಕ ಮಾಹಿತಿ ಹಂಚಿಕೊಂಡಿದ್ದಾರೆ.

ಘಟನೆಯ ಹಿನ್ನೆಲೆ:

ಮೀನಿನ ಟೆಂಪೋ ಚಾಲಕನಾಗಿದ್ದ ಸಯ್ಯದ್ ಅನ್ವರ್, ಕಳೆದ ಕೆಲವು ಸಮಯದಿಂದ ಕೆಲಸವಿಲ್ಲದೆ ಮನೆಯಲ್ಲಿದ್ದ. ಈತ ಇಸ್ಮಾಯಿಲ್ ಎಂಬವರ ಬಾಡಿಗೆ ಮನೆಯಲ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ವಾಸವಾಗಿದ್ದ. ಪತಿ-ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಈ ಹಿಂದೆ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ಕೂಡ ನೀಡಲಾಗಿತ್ತು.

ಗುರುವಾರ ಮತ್ತೆ ದಂಪತಿ ನಡುವೆ ತೀವ್ರ ಗಲಾಟೆಯಾಗಿದ್ದು, ಇದರಿಂದ ಬೇಸತ್ತ ಪತ್ನಿ ತನ್ನ 2 ವರ್ಷದ ಮಗುವನ್ನು ಕರೆದುಕೊಂಡು ತವರು ಮನೆಗೆ ತೆರಳಿದ್ದರು.

ವಾಟ್ಸಪ್ ಮೆಸೇಜ್ ಕಳುಹಿಸಿ ಆಹುತಿ:

ಪತ್ನಿ ಮನೆ ತೊರೆದಿದ್ದರಿಂದ ತೀವ್ರ ಮನನೊಂದಿದ್ದ ಅನ್ವರ್, ಶುಕ್ರವಾರ ಮುಂಜಾನೆ ತನ್ನ ಅಕ್ಕನ ವಾಟ್ಸಪ್‌ಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದಾನೆ. ಅದರಲ್ಲಿ ‘ಪತ್ನಿ ಹಾಗೂ ಆಕೆಯ ಮನೆಯವರ ಕಿರುಕುಳ ತಾಳಲಾರದೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದ.

ಸಂದೇಶ ಕೇಳಿ ಬೆಚ್ಚಿಬಿದ್ದ ಕುಟುಂಬಸ್ಥರು ತಕ್ಷಣವೇ ಆತನ ಬಾಡಿಗೆ ಮನೆಗೆ ಧಾವಿಸಿ ಬಂದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅನ್ವರ್ ಜೀವ ತೊರೆದಿದ್ದ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮೂಡುಬಿದಿರೆ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.