ಕಾನೂನು ಬಾಹಿರ ಕೃತ್ಯದಲ್ಲಿ ಯು ಟಿ ಖಾದರ್ ಮದ್ಯ ಪ್ರವೇಶಿಸಿದ್ದರೆ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ : ಕಮಿಷನರ್ ಸುಧೀರ್ ಕುಮಾರ್ ರೆಡ್ಡಿಯವರನ್ನು ಸಾರ್ವಜನಿಕವಾಗಿ ಟಾರ್ಗೆಟ್ ಘಟನೆ
🖋️ ಮುನೀರ್ ಕಾಟಿಪಳ್ಳ
ಉಸ್ತುವಾರಿ ಸಚಿವ ಯು ಟಿ ಖಾದರ್ ಅವರು ಮತ್ತೊಮ್ಮೆ ಉದ್ದೇಶಪೂರ್ವಕವಾಗಿ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿಯವರನ್ನು ಸಾರ್ವಜನಿಕವಾಗಿ ಟಾರ್ಗೆಟ್ ಮಾಡಿದ್ದಾರೆ. "ಕೆಡಿಪಿ ಸಭೆಗೆ ಯಾಕೆ ಬಂದಿಲ್ಲ ? ಗೈರು ಹಾಜರಿ ಬಗ್ಗೆ ಮಾಹಿತಿ ಯಾಕೆ ನೀಡಿಲ್ಲ ? ಉಳಿದವರಿಗೆ ಕಾನೂನು ಪಾಠ ಮಾಡ್ತಾರೆ, ಅವರು ಕಾನೂನು ಪಾಲಿಸಬೇಕಲ್ವಾ?" ಎಂದು ಸಾರ್ವಜನಿಕವಾಗಿ ಅವಮಾನಿಸಿದ್ದಾರೆ.
ಮೊದಲನೆಯದಾಗಿ ಈ ಸರ್ಕಾರದಲ್ಲಿ, ಅದೂ ತನ್ನ ಜಿಲ್ಲೆಯಲ್ಲಿ ಕಾನೂನು ಬಿಟ್ಟು ಬೇರೇನೂ ಮಾತನಾಡದ/ಮಾಡದ ಕಮಿಷನರ್ ಇದ್ದಾರೆ ಎಂಬ ಬಗ್ಗೆ ಯು ಟಿ ಖಾದರ್ ಹೆಮ್ಮೆ ಪಟ್ಟುಕೊಳ್ಳಬೇಕಿತ್ತು. ಆದರೆ ಕಾನೂನು ಮಾತನಾಡುವ ಕಮಿಷನರ್ ಬಗ್ಗೆ ಅಸಹನೆ ಉಂಟಾಗಿದ್ದು ಯಾಕೆ ? ಕಮಿಷನರ್ ಅವರು ಯು ಟಿ ಖಾದರ್ ಗೆ ಕಾನೂನು ಪಾಠ ಮಾಡಿದ ಘಟನೆ ಯಾವುದು ? ಅಂತಹ ಕಾನೂನು ಬಾಹಿರ ಕೃತ್ಯದಲ್ಲಿ ಯು ಟಿ ಖಾದರ್ ಮದ್ಯ ಪ್ರವೇಶಿಸಿದ್ದರೆ ಎಂಬ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಎದ್ದಿವೆ.
ಇಷ್ಟಕ್ಕೂ ಕೆಡಿಪಿ ಸಭೆಗೆ ಕಮಿಷನರ್ ಹಾಜರಾಗಲೇಬೇಕು ಎಂದೇನಿಲ್ಲ. ಜಿಲ್ಲಾ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (KDP) ಸಭೆಯ ಅಧ್ಯಕ್ಷತೆಯನ್ನು ಸಾಮಾನ್ಯವಾಗಿ ಜಿಲ್ಲಾ ಉಸ್ತುವಾರಿ ಸಚಿವರು ವಹಿಸುತ್ತಾರೆ. ಸಭೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ CEO, ಶಾಸಕರು/ವಿಧಾನಪರಿಷತ್ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸುತ್ತಾರೆ. ಈ ಕೆಡಿಪಿ ಸಭೆಗೆ “ಪೊಲೀಸ್ ಇಲಾಖೆ” ಪ್ರತಿನಿಧಿತ್ವ ಇರಬೇಕು ಎಂಬುದು ನಿಯಮ. ಎಲ್ಲೂ ಕೂಡಾ “ಪೊಲೀಸ್ ಕಮಿಷನರ್ ಅವರೇ ಖುದ್ದಾಗಿ ಹಾಜರಾಗಬೇಕು” ಎಂಬುದು ಇಲ್ಲ. ಆದರೆ ಡಿಸಿ, ಸಿಇಒ ಖುದ್ದು ಹಾಜರಿರಬೇಕು.
ಕೆಡಿಪಿ ಸಭೆ ಎಂದರೆ ಜಿಲ್ಲಾ ಮಟ್ಟದ ಅಭಿವೃದ್ದಿ ಯೋಜನೆಗಳ ಪರಿಶೀಲನಾ ಸಭೆ. ಪೊಲೀಸ್ ಆಯುಕ್ತರು ಯಾವ ಅಭಿವೃದ್ದಿ ಯೋಜನೆಯ ನೇರ ಭಾಗವಲ್ಲ. ಅವರು ಕಾನೂನು ಸುವ್ಯವಸ್ಥೆಯ ನೇರ ಜವಾಬ್ದಾರಿ ಹೊಂದಿರುವವರು. ಅವರ ಭಾಗವಹಿಸುವಿಕೆ ಕೆಡಿಪಿ ಸಭೆಯಲ್ಲಿ ನಗಣ್ಯ. ಅದು ನೇರವಾಗಿ ಜಿಲ್ಲಾ ಪಂಚಾಯತ್ ಮಟ್ಟದ ಅಧಿಕಾರಿಗಳ ಕೇಂದ್ರಿತ ಸಭೆ. ಅದಕ್ಕೆ ಎಲ್ಲಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಾಗಿ ಅಭಿವೃದ್ದಿ ಯೋಜನೆಗಳ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ. ಅಭಿವೃದ್ದಿ ಯೋಜನೆಗೆ ಸಂಬಂಧಪಡದ ಪೊಲೀಸ್ ಕಮಿಷನರ್ ಉಪಸ್ಥಿತಿ ಯಾಕೆ ಬೇಕು ?
ಇಷ್ಟಕ್ಕೂ ಪೊಲೀಸ್ ಕಮಿಷನರ್ ಹುದ್ದೆ ಎನ್ನುವುದು ಜಿಲ್ಲಾ ಮಟ್ಟದ ಹುದ್ದೆಯೇ ಅಲ್ಲ. ಪೊಲೀಸ್ ಕಮಿಷನರ್ ನಗರ ಕೇಂದ್ರಿತ ಅಧಿಕಾರಿ ಮಾತ್ರ. ಕೆಡಿಪಿ ಸಭೆ ಎನ್ನುವುದು ಜಿಲ್ಲಾ ಕೇಂದ್ರಿತ ಸಭೆ. ಜಿಲ್ಲೆಯ ಸಭೆಗೆ ನಗರ ಪೊಲೀಸ್ ಅನ್ನು ಪ್ರತಿನಿಧಿಸುವ ಡಿಸಿಪಿ ಇದ್ದರೆ ಸಾಕಾಗುತ್ತದೆ. ಡಿಸಿಪಿ ಕೂಡಾ ಇಡೀ ನಗರದ ವ್ಯಾಪ್ತಿಯನ್ನೇ ಹೊಂದಿದ್ದಾರೆ.
ಒಂದು ವೇಳೆ ಕೆಡಿಪಿ ಮೀಟಿಂಗ್ ನಲ್ಲಿ ಕಮಿಷನರ್ ಉಪಸ್ಥಿತಿ ಅತ್ಯಗತ್ಯವಾಗಿದೆ ಎಂದು ಮೊದಲೇ ಉಸ್ತುವಾರಿ ಸಚಿವರಿಗೋ ಜಿಲ್ಲಾಡಳಿತಕ್ಕೋ ಅನ್ನಿಸಿದ್ದರೆ ಆಗ ಕೆಡಿಪಿ ಸಭೆಯ ಆಹ್ವಾನ ಪತ್ರದಲ್ಲಿ(ನೋಟಿಸ್ ನಲ್ಲಿ) “Commissioner of Police shall attend the meeting personally” ಎಂದು ನಮೂದಿಸಬೇಕು. ಆದರೆ ಕೆಡಿಪಿ ಸಭೆಯ ಆಹ್ವಾನ ನೋಟಿಸ್ ನಲ್ಲಿ ಸಹಜವಾಗಿ ಹಾಗೆ ಬರೆದಿರುವುದಿಲ್ಲ.
ಆದ್ದರಿಂದ, ಕಮಿಷನರ್ ಅನಿವಾರ್ಯ ಕಾರಣದಿಂದ ಬರಲಾಗದ ಸಂದರ್ಭದಲ್ಲಿ, ಅವರಿಂದ ಅಧಿಕೃತವಾಗಿ ನಿಯೋಜಿಸಲ್ಪಟ್ಟ ಸಮರ್ಥ ಹಿರಿಯ ಅಧಿಕಾರಿಯನ್ನು ಕಳುಹಿಸುವುದು ಸಹಜ.
ಕೆಡಿಪಿ ಸಭೆಯ ಬಳಿಕ ಜಿಲ್ಲಾ ಮಟ್ಟದ ಆಡಳಿತ ವರದಿಯನ್ನು ಆಯಾ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವಿಧಾನಸಭೆಗೆ ಸಲ್ಲಿಸುತ್ತಾರೆ. ವಿಧಾನಸಭೆಯ ಸ್ಪೀಕರ್ ಆಗಿದ್ದಂತಹ ಯು ಟಿ ಖಾದರ್ ಕನಿಷ್ಟ ಅಂತಹ ವರದಿಗಳನ್ನಾದರೂ ಅಧ್ಯಯನ ಮಾಡಿ ಕೆಡಿಪಿ ಸಭೆ ನಡೆಸಬೇಕು. ಈಗ ದ ಕ ಜಿಲ್ಲಾಧಿಕಾರಿಯಾಗಿರುವ ದರ್ಶನ್ ಅವರೇ ಈ ಹಿಂದೆ ಕೋಲಾರ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸಲ್ಲಿಸಿರುವ ವರದಿಗಳಿವೆ. ಆ ವರದಿಗಳಲ್ಲಿ ಪೊಲೀಸ್ ಕಮಿಷನರ್ ಅಥವಾ ಪೊಲೀಸ್ ಎಸ್ಪಿಯ ಪಾತ್ರ ನಗಣ್ಯ ಎಂದು ಅರ್ಥವಾಗುತ್ತದೆ. ಕೆಡಿಪಿ ಸಭೆ ಎನ್ನುವುದು ಸರ್ಕಾರ ಘೋಷಿಸಿದ ಯೋಜನೆಗಳ ಬಗ್ಗೆ ಪರಾಮರ್ಶನಾ ಸಭೆಯಾಗಿದ್ದು, ಅದರಲ್ಲಿ ಜಿಲ್ಲಾ ಮಟ್ಟದ ಯೋಜನಾ/ಕಾರ್ಯನಿರ್ವಾಹಣಾ/ ಜಿಲ್ಲಾ ಅಧಿಕಾರಿಗಳು ಭಾಗವಹಿಸಬೇಕು.
ಹಾಗಾಗಿ, ಇನ್ನು ಮುಂದಾದರೂ ಒತ್ತಡಕ್ಕೆ ಮಣಿಯದೆ ಕರ್ತವ್ಯ ನಿರ್ವಹಿಸುವ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿಯವರನ್ನು ಟಾರ್ಗೆಟ್ ಮಾಡುವುದು, ಸಾರ್ವಜನಿಕವಾಗಿ ಕುಬ್ಜಗೊಳಿಸುವುದನ್ನು ಯು ಟಿ ಖಾದರ್ ಅವರು ನಿಲ್ಲಿಸುವುದು ಅವರ ರಾಜಕೀಯ ದೃಷ್ಟಿಯಿಂದ ಉತ್ತಮ.

