ಬರಹ : ✒️ಮುನೀರ್ ಕಾಟಿಪಳ್ಳ
ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರದಂತಹ ಅತಿ ಹೀನ ಅಪರಾಧಗಳನ್ನೂ ಸಮುದಾಯದ ದೃಷ್ಟಿಯಲ್ಲಿ ನೋಡುವ, ಪ್ರತಿಕ್ರಿಯಿಸುವ ಪ್ರವೃತ್ತಿ ಬೆಳೆಯುತ್ತಿದೆ.
ಕಾಟಿಪಳ್ಳದ ಬಾಲಕಿಯೊಬ್ಬಳು ಹಿಂದುತ್ವವಾದಿ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಯುವಕನೊಬ್ಬನಿಂದ ಲೈಂಗಿಕ ದುರ್ಬಲಕೆ, ಪ್ರೇಮವಂಚನೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಇದು ಎದ್ದು ಕಾಣಿಸುತ್ತಿದೆ. ಇಲ್ಲಿ ಆರೋಪಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವನಾಗಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ? ಅದರಲ್ಲೂ ಬಾಲಕಿಗೆ ಹಾಗು ಕುಟುಂಬಕ್ಕೆ ಸ್ಥಳೀಯ ಬಿಜೆಪಿ, ಪರಿವಾರದ ಮುಖಂಡರ ಸಂಪರ್ಕ ಇತ್ತು ಎಂಬುದು ಆಕೆಯ ಡೆತ್ ನೋಟ್ ನಲ್ಲೆ ವೇದ್ಯವಾಗುತ್ತದೆ.
ಆದರೂ ಯಾರೊಬ್ಬರೂ ಬಾಯಿ ಬಿಡುತ್ತಿಲ್ಲ. ಎಲ್ಲೆಡೆ ಗಾಢ ಮೌನ ! ಇಂತಹ ಪ್ರಕರಣಗಳಲ್ಲಿ ಆರೋಪಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದ ಸಂದರ್ಭದಲ್ಲಿ ಎಷ್ಟೆಲ್ಲಾ ಹಂಗಾಮ ನಡೆದಿಲ್ಲ ? ಪ್ರತಿಭಟನೆಗಳು, ಒಂದು ಸಮುದಾಯವನ್ನೆ ಅಪರಾಧಿಯಾಗಿಸಿ ದ್ವೇಷ ಭಾಷಣಗಳು ಜರುಗಿ ಭೀತಿಯ ವಾತಾವರಣ ಸೃಷ್ಟಿಯಾಗಿಲ್ಲ ? ಶೋಭಾ ಕರಂದ್ಲಾಜೆಯಂತಹ ಪ್ರಮುಖರೂ ಧಾವಿಸಿ ಬಂದಿಲ್ಲ ? ಶಾಸಕ ಭರತ್ ಶೆಟ್ಟಿ ಸುಮ್ಮನಿರುತ್ತಿದ್ದರೆ ? ತನ್ನ ಕ್ಷೇತ್ರದಲ್ಲಿ ನಡೆದಿರುವ ಈ ದುರ್ಘಟನೆಯ ಕುರಿತು ಈಗ ಅವರೇಕೆ ಮಾತಾಡುತ್ತಿಲ್ಲ ?
ಕಾಟಿಪಳ್ಳ ಪ್ರಕರಣದಲ್ಲಿ ಪೊಲೀಸರು ಸರಿಯಾದ ರೀತಿಯ ಕ್ರಮಗಳನ್ನು ಜರುಗಿಸಿದ್ದಾರೆ. ಅಪರಾಧಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳುತ್ತಾರೆ ಎಂಬ ನಂಬಿಕೆಯೂ ಇದೆ. ಊರಿನಲ್ಲಿ ನಡೆದಿರುವ ಖೇದಕರವಾದ ಈ ಘಟನೆಯ ಕುರಿತು ವಿಷಾದವಿದೆ. ಹೆಚ್ಚು ಮತಾಡುವುದು, ರಾಜಕೀಯ ಉದ್ದೇಶಕ್ಕಾಗಿ ಯಾರದಾದರು ತಲೆಗೆ ಹೊಣೆಯನ್ನು ಕಟ್ಟುವುದರಲ್ಲಿಯೂ ಆಸಕ್ತಿ ಇಲ್ಲ. ಹಾಗೆ ಮಾಡಬಾರದೂ ಸಹ.
ಆದರೂ ಕೆಲವು ಪ್ರಶ್ನೆಗಳಿವೆ. ಪ್ರಮುಖವಾಗಿ ಡೆತ್‌ನೋಟ್ ಪ್ರಕಾರವೆ, ಆಕೆ ಕೆಲವು ಸ್ಥಳೀಯ ಪ್ರಮುಖರಲ್ಲಿ ನ್ಯಾಯಕೊಡಿಸಿ ಎಂದು ಕೋರಿದ್ದಳು ಎಂಬುದು. ಅದು ಹೌದು ಅಂತಾದರೆ, ಸ್ಥಳೀಯ ರಾಜಕೀಯ ಪ್ರಮುಖರು ಜವಾಬ್ದಾರಿ ನಿರ್ವಹಿಸಬೇಕಿತ್ತಲ್ಲವೆ ? ಪುತ್ತೂರಿನ ಪ್ರಕರಣದಲ್ಲಿಯೂ ಯುವತಿಗೆ ಇಂತಹದ್ದೇ ಅನ್ಯಾಯ ಆಯಿತು. ಅಲ್ಲಿ ಯುವತಿ ಹಾಗು ಆಕೆಯ ತಾಯಿ, ಕುಟುಂಬ ಗಟ್ಟಿಯಾಗಿ ನಿಂತ ಕಾರಣಕ್ಕೆ ಇಂದಿಗೂ ನ್ಯಾಯಕ್ಕಾಗಿ ಬಡಿದಾಡುತ್ತಿದ್ದಾರೆ, ಬದುಕುಳಿದಿದ್ದಾರೆ.
ಕಾಟಿಪಳ್ಳ ಪ್ರಕರಣದಲ್ಲಿ ಬಾಲಕಿಯದ್ದು ತೀರಾ ಬಡ ಕುಟುಂಬ. ಹೋರಾಡುವ ಶಕ್ತಿ, ದೃಢತೆ ಅವರಲ್ಲಿ ಇರಲಿಲ್ಲ. ಸಮಯಕ್ಕೆ ಸರಿಯಾಗಿ ಬೆಂಬಲವೂ ಸಿಗಲಿಲ್ಲ.
ಸಮಾಜಕ್ಕೆ ಈ ಪ್ರಕರಣದಲ್ಲಿ ಹಲವು ಪಾಠಗಳಿವೆ. ಧರ್ಮ, ರಾಜಕಾರಣದ ಕಾರಣಕ್ಕೆ ಇಂತಹ ಪ್ರಕರಣಗಳಲ್ಲಿ ಆಸಕ್ತಿ ವಹಿಸುವ, ಬೀದಿಗೆ ಇಳಿಯುವವರ ಕುರಿತು ಎಚ್ಚರ ವಹಿಸಬೇಕಿದೆ. ಬಾಲಕಿಯರು, ಹೆಣ್ಣು ಮಕ್ಕಳು, ಅವರ ಕುಟುಂಬ ಅತ್ಯಂತ ಎಚ್ಚರದಿಂದ ಇರಬೇಕಿದೆ. ಅವಘಡಗಳು ಸಂಭವಿಸಿದರೆ ದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ, ಸಮಾಜದಲ್ಲಿ ಒಂಟಿಯಾಗಬೇಕಾಗುತ್ತದೆ. ಪೊಲೀಸರು, ಕಾನೂನು ಅಪರಾಧಿಗಳನ್ನು ಶಿಕ್ಷಿಸಬಹುದು. ಕಳೆದುಕೊಂಡದ್ದನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ರಕ್ತದ ರುಚಿಕಂಡಿರುವ ರಾಜಕಾರಣವನ್ನು ಬಿಡಿ, ಅದು ಯಾವತ್ತೂ ನ್ಯಾಯಕೊಡಿಸುವುದಿಲ್ಲ, ನ್ಯಾಯಯುತವಾಗಿ ನಡೆದುಕೊಂಡಿಲ್ಲ, ನಡೆದುಕೊಳ್ಳುವುದೂ ಇಲ್ಲ.
.jpeg)