ಪ್ರಾದೇಶಿಕ

ಮತದಾರರ ಪಟ್ಟಿ ಪರಿಷ್ಕರಣೆ: ದ.ಕ. ಜಿಲ್ಲೆಯಲ್ಲಿ ಕೇವಲ ಶೇ. 11.86 ರಷ್ಟು ಫಾರ್ಮ್‌ಗಳು ಮಾತ್ರ ಸಲ್ಲಿಕೆ; ವಿಳಂಬ ಮಾಡದೆ ತಕ್ಷಣವೇ ಸಲ್ಲಿಸಲು ಡಿಸಿ ದರ್ಶನ್ ಹೆಚ್.ವಿ ಕಟ್ಟುನಿಟ್ಟಿನ ಸೂಚನೆ!



ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿತರಿಸಲಾಗಿರುವ ಎನ್ಯುಮರೇಷನ್ ಫಾರ್ಮ್‌ಗಳ ಪೈಕಿ ಸಾರ್ವಜನಿಕರಿಂದ ಮರಳಿ ಬಂದಿರುವುದು ಕೇವಲ ಶೇ. 11.86 ರಷ್ಟು ಮಾತ್ರ ಎಂದು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತದಾರರು ಜುಲೈ 29ರ ಕೊನೆಯ ದಿನದವರೆಗೆ ಕಾಯದೆ, ತಕ್ಷಣವೇ ಫಾರ್ಮ್‌ಗಳನ್ನು ಭರ್ತಿ ಮಾಡಿ ತಲುಪಿಸಬೇಕು ಎಂದು ವಿಶೇಷ ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿದ್ದಾರೆ. ಒಂದು ವೇಳೆ ಈ ಫಾರ್ಮ್ ಸಲ್ಲಿಸದಿದ್ದರೆ ಮುಂಬರುವ ಕರಡು ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟು ಹೋಗುವ ಸಾಧ್ಯತೆ ಇರುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.



​ಚುನಾವಣಾ ಆಯೋಗದ ಆದೇಶದಂತೆ ಜಿಲ್ಲೆಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯು ತೀವ್ರಗತಿಯಲ್ಲಿ ಸಾಗುತ್ತಿದೆ. ಜಿಲ್ಲೆಯ ಒಟ್ಟು 18,37,666 ಮತದಾರರ ಪೈಕಿ ಬಿಎಲ್‌ಒಗಳು ಈಗಾಗಲೇ 17,75,811 ನಾಗರಿಕರಿಗೆ (ಶೇ. 98.45) ಫಾರ್ಮ್‌ಗಳನ್ನು ವಿತರಿಸಿದ್ದಾರೆ. ಆದರೆ, ಈ ಬೃಹತ್ ಮೊತ್ತದಲ್ಲಿ ಜಿಲ್ಲಾಡಳಿತಕ್ಕೆ ಸಾರ್ವಜನಿಕರಿಂದ ವಾಪಸ್ ಸಿಕ್ಕಿರುವುದು ಕೇವಲ 2,13,939 ಫಾರ್ಮ್‌ಗಳು ಮಾತ್ರ ಎಂದು ಜಿಲ್ಲಾಧಿಕಾರಿಗಳು ಅಂಕಿ-ಅಂಶಗಳನ್ನು ಹಂಚಿಕೊಂಡಿದ್ದಾರೆ.



ಕೊನೆ ದಿನಗಳಲ್ಲಿ ತಾಂತ್ರಿಕ ಸಮಸ್ಯೆಯ ಆತಂಕ:

​ಇನ್ನೂ ಸಮಯಾವಕಾಶ ಇರುವುದರಿಂದ ಬಹಳಷ್ಟು ನಾಗರಿಕರು ಫಾರ್ಮ್‌ಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಆದರೆ, ಜುಲೈ 29ರ ಗಡುವಿನ ಒಳಗಾಗಿ ಈ ಎಲ್ಲಾ ಲಕ್ಷಾಂತರ ಅರ್ಜಿಗಳನ್ನು ಆ್ಯಪ್ ಮುಖಾಂತರ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಬಿಎಲ್‌ಒಗಳಿಗೆ ಒಂದು ಫಾರ್ಮ್ ಅನ್ನು ಡಿಜಿಟಲೀಕರಣಗೊಳಿಸಲು ಕನಿಷ್ಠ 2 ರಿಂದ 4 ನಿಮಿಷಗಳ ಸಮಯ ಬೇಕಾಗುವುದರಿಂದ, ಕೊನೆಯ ದಿನಗಳಲ್ಲಿ ಎಲ್ಲವನ್ನೂ ಒಟ್ಟಿಗೆ ಮಾಡುವುದು ತಾಂತ್ರಿಕವಾಗಿ ಅಸಾಧ್ಯವಾಗುತ್ತದೆ. ಆದ್ದರಿಂದ ನಾಗರಿಕರು ವಿಳಂಬ ಮಾಡದೆ ಇದೇ ವಾರದಲ್ಲಿ ತಮ್ಮ ಫಾರ್ಮ್‌ಗಳನ್ನು ಒಪ್ಪಿಸಬೇಕು ಎಂದು ಡಿಸಿ ದರ್ಶನ್ ಹೆಚ್.ವಿ ಸ್ಪಷ್ಟಪಡಿಸಿದ್ದಾರೆ.



ಕರಡು ಪಟ್ಟಿಗೆ ಫಾರ್ಮ್ ಸಲ್ಲಿಕೆ ಕಡ್ಡಾಯ:

​ಸಾರ್ವಜನಿಕರು ತಾವು ಭರ್ತಿ ಮಾಡಿ ನೀಡುವ ಎನ್ಯುಮರೇಷನ್ ಫಾರ್ಮ್‌ಗಳ ಆಧಾರದ ಮೇಲೆ ಮಾತ್ರವೇ ಜುಲೈ 29ರ ನಂತರ ಹೊರಬರುವ ಡ್ರಾಫ್ಟ್ (ಕರಡು) ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಮುಂದುವರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅಥವಾ ಫಾರ್ಮ್ ಭರ್ತಿ ಮಾಡುವಲ್ಲಿ ಯಾವುದೇ ರೀತಿಯ ಗೊಂದಲಗಳಿದ್ದಲ್ಲಿ, ಸಾರ್ವಜನಿಕರು ತಮ್ಮ ವ್ಯಾಪ್ತಿಯ ಮತಗಟ್ಟೆಗಳಲ್ಲಿರುವ 'ಮತದಾರರ ಸಹಾಯ ಕೇಂದ್ರ'ಕ್ಕೆ (Voter Facilitation Center) ಭೇಟಿ ನೀಡಿ ಅಧಿಕಾರಿಗಳ ನೆರವು ಪಡೆಯಬಹುದು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.