ಅಂಕಣ

18ನೇ ದಿನಕ್ಕೆ ಕಾಲಿಟ್ಟ ಸೋನಮ್ ವಾಂಗ್ ಚುಕ್ ನಿರಾಹಾರ ಉಪವಾಸ ಸತ್ಯಾಗ್ರಹ : ಬ್ರಿಟೀಷ್, ಹಿಟ್ಲರ್ ಆಡಳಿತ ಇರುತ್ತಿದ್ದರೆ ಮರುಗುತ್ತಿದ್ದರೇನು?

 

18ನೇ ದಿನಕ್ಕೆ ಕಾಲಿಟ್ಟ ಸೋನಮ್ ವಾಂಗ್ ಚುಕ್ ನಿರಾಹಾರ ಉಪವಾಸ ಸತ್ಯಾಗ್ರಹ : ಬ್ರಿಟೀಷ್, ಹಿಟ್ಲರ್ ಆಡಳಿತ ಇರುತ್ತಿದ್ದರೆ ಮರುಗುತ್ತಿದ್ದರೇನು?

  🖋️ ಕೃಷ್ಣಾನಂದ ಡಿ.

ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ಶಿಕ್ಷಣ ತಜ್ಙ, ಸಾಮಾಜಿಕ ಹೋರಾಟಗಾರ, ಸೋನಮ್ ವಾಂಗ್ ಚುಕ್ ನಡೆಸುತ್ತಿರುವ ನಿರಾಹಾರ ಉಪವಾಸ ಸತ್ಯಾಗ್ರಹ 18ನೇ ದಿನಕ್ಕೆ ಕಾಲಿಟ್ಟಿದೆ. ಅವರ ಆರೋಗ್ಯ ಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ದೇಹ ತೂಕ 8.5ಕೆ.ಜಿಯಷ್ಟು ಇಳಿಕೆಯಾಗಿದೆ. ರಕ್ತದೊತ್ತಡವು ಇಳಿಕೆಯಾಗುತ್ತಿದೆ. ನಮ್ಮ ಜಿಡ್ಡು ಕಟ್ಟಿದ ಆಡಳಿತ ವ್ಯವಸ್ಥೆ ಮಾತ್ರ ತುಟಿಕ್ ಪಿಟಿಕ್ ಎನ್ನದೆ ತಾನು ಆಡಿದ್ದೇ ಆಟ ಎನ್ನುವ ರೀತಿಯಲ್ಲಿ ವರ್ತಿಸುತ್ತಿದೆ.

            ಇಷ್ಟಕ್ಕೂ ಈ ಸೋನಮ್ ವಾಂಗ್ ಚುಕ್ ತನ್ನ ಆಸ್ತಿ ಉಳಿಸಲು ಉಪವಾಸ ಸತ್ಯಾಗ್ರಹ ನಡೆಸುತ್ತಿಲ್ಲ, ಬದಲಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ನುಸುಳಿಕೊಂಡಿರುವ ವ್ಯಾಪಕ ಅಕ್ರಮಗಳ ವಿರುದ್ಧ, ಈಗಾಗಲೇ ನೀಟ್ ಪ್ರಶ್ನೆ ಪತ್ರಿಕೆಯ ಸೋರಿಕೆ ಅದೆಷ್ಟೋ ವಿದ್ಯಾರ್ಥಿಗಳ ಬದುಕಿಗೆ ಕೊಳ್ಳಿ ಇಟ್ಟಿರುವ ಅಕ್ಷಮ್ಯಗಳ ವಿರುದ್ಧ ಅನ್ನುವುದನ್ನು ಸ್ವತ:ಹ ಬಹುತೇಕ ವಿದ್ಯಾರ್ಥಿಗಳು, ಯುವಜನರು ಯೋಚಿಸದಿರುವುದು ವಿಪರ್ಯಾಸ!.


ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ

ಕಳೆದ 18 ದಿನಗಳಿಂದ ನಿರಾಹಾರ ಸತ್ಯಾಗ್ರಹದಲ್ಲಿರುವ ವಾಂಗ್ ಚುಕ್ ಸುಮಾರು 23 ಮಂದಿ ವಿದ್ಯಾರ್ಥಿಗಳ ಸಾವಿಗೆ ಕಾರಣವಾದ ಮತ್ತು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಅಡಕತ್ತರಿಯಲ್ಲಿ ಸಿಲುಕಿಸಿದ್ದ ನೀಟ್ ಪ್ರಶ್ನೆ ಪತ್ರಿಕೆಯ ಸೋರಿಕೆಯ ಹೊಣೆಯನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಹಿಸಿಕೊಳ್ಳಬೇಕು ಎಂದಷ್ಟೇ ಅವರು ಆಗ್ರಹಿಸುತ್ತಿದ್ದಾರೆ. ಮೂಲಕ ತೊಂದರೆಗೊಳಗಾದ ವಿದ್ಯಾರ್ಥಿಗಳಲ್ಲಿ ಮತ್ತು ಭವಿಷ್ಯದ ನೀಟ್ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ತುಂಬುವುದು ಅವರ ಉದ್ದೇಶ. ಆದರೆ ಕೇಂದ್ರ ಸರಕಾರ ಇವರತ್ತ ತಿರುಗಿಯೂ ನೋಡ್ತಾ ಇಲ್ಲ.

            ಈ ನೀಟ್ ಪ್ರಶ್ನೆ ಪತ್ರಿಕೆಯ ಸೋರಿಕೆಯನ್ನು ಪ್ರತಿಭಟಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ ನೀಡುವಂತೆ ಒತ್ತಾಯಿಸಿ  ಸಿ.ಜೆ.ಪಿ ಪಾರ್ಟಿ ಹಮ್ಮಿಕೊಂಡ ಪ್ರತಿಭಟನೆಗೆ ಬೆಂಬಲಾರ್ಥವಾಗಿ ಸೋನಮ್ ವಾಂಗ್ ಚುಕ್ ಈ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ಮಹತ್ವ ಪಡೆದುಕೊಂಡಿದೆ.

ಪ್ರಜಾಪ್ರಭುತ್ವವನ್ನು ಅಣಕಿಸಿದಂತೆ

            ಯಾರೇ ಹೋರಾಟಗಾರರಿಲಿ ಇಂತಹ ಪ್ರತಿಭಟನೆಗಳನ್ನು ಹಮ್ಮಿಕೊಂಡಾಗ ಆಡಳಿತ ವ್ಯವಸ್ಥೆಯ ಪ್ರಮುಖರನ್ನು ಕಳುಹಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಭರವಸೆ ನೀಡುವುದು ಸಹಜ ಪ್ರಕ್ರಿಯೆ. ಆದರೆ ಸೋನಮ್ ವಾಂಗ್ ಚುಕ್ ರವರು ನಡೆಸುತ್ತಿರುವ ಪ್ರತಿಭಟನೆ 18ನೇ ದಿನಕ್ಕೆ ಕಾಲಿಟ್ಟರೂ ಎಲ್ಲದ್ದಕೂ ಪ್ರತಿಕ್ರಿಯಿಸುವ ಪ್ರಧಾನಿ ಮೋದಿಯಾಗಲಿ, ಸಂಪುಟದ ಯಾವುದೇ ಸಚಿವರಾಗಲಿ ತುಟಿ ಬಿಚ್ಚದಿರುವುದು ಪ್ರಜಾಪ್ರಭುತ್ವವನ್ನು ಅಣಕಿಸಿದಂತೆಯೇ.! ಬಹುಶ ಇಂತಹ ಸಂಧರ್ಭದಲ್ಲಿ ಬ್ರಿಟೀಷ್ ಆಡಳಿತ, ಸರ್ವಾಧಿಕಾರಿ ಹಿಟ್ಲರ್-ಮುಸಲೋನಿ ಆಡಳಿತ ಇರುತ್ತಿದ್ದರೆ ಕನಿಷ್ಟ ಸೌಜನ್ಯಕ್ಕಾದರೂ ಕೂಗು ಆಲಿಸುತ್ತಿದ್ದರೇನೋ?


ವಾಂಗ್ಚುಕ್ ಅವರ ಬದುಕೇ ಪ್ರೇರಣೆ

ಏಷ್ಯಾದ ನೋಬೆಲ್ ಎಂದೇ ಗುರುತಿಸಿಕೊಂಡಿರುವ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಷ್ಕೃತರಾದ ವಾಂಗ್ ಚುಕ್ ಲಡಾಕ್ ಶಾಲೆಗಳನ್ನು ಸೋಲಾರ್ ಕ್ಯಾಂಪಸ್ ಆಗಿ ಪರಿವರ್ತಿಸಿದ ಅದ್ಭುತ ಇಂಜಿನಿಯರ್ ಮತ್ತು ವಿಜ್ಞಾನಿ. ಕಾಶ್ಮೀರದ ಲಢಾಕ್ ಭಾರತೀಯ ಯೋಧರನ್ನು ಚಳಿಯಿಂದ ಕಾಪಾಡುವುದಕ್ಕಾಗಿ ಸೋಲಾರ್ ಟೆಂಟ್ ಗಳನ್ನು ಆವಿಷ್ಕರಿಸಿರುವ ಒಬ್ಬ ವಿಜ್ಞಾನಿ, ಲಡಾಕ್ ನಲ್ಲಿ ಐಸ್ ಸ್ತುಫಾ ಎಂಬ ಮಂಜುಗಡ್ಡೆ ಗೋಪುರವನ್ನು ನಿರ್ಮಿಸಿ ಜಾಗತಿಕ ಮನ್ನಣೆಗಳಿಸಿದ, ಚಳಿಗಾಲದಲ್ಲಿ ಐಸ್ ಗೋಪುರಗಳ ಮೂಲಕ ನೀರನ್ನು ಸಂಗ್ರಹಿಸಿ ಬೇಸಿಗೆ ಕಾಲದಲ್ಲಿ ಅದೇ ನೀರನ್ನು ಕೃಷಿ ಮತ್ತು ಕುಡಿಯಲು ಬಳಸುವ ವಿಶಿಷ್ಟ ವ್ಯವಸ್ಥೆಯನ್ನು ಮಾಡಿರುವ ಈ ಮಹಾನ್ ವ್ಯಕ್ತಿಯ ಅಹವಾಲನ್ನು ಸರಕಾರ ಆಲಿಸದೆ, ಸರಕಾರ ನಡೆದುಕೊಳ್ಳುವ ರೀತಿ ಮಾತ್ರ  ನಾಚಿಗೇಡಿನ ವಿಚಾರ.

 ಇನ್ನು ಅಮೀರ್ ಖಾನ್ ಅಭಿನಯಿಸಿರುವ  ತ್ರೀ ಈಡಿಯಟ್ಸ್ ಸಿನಿಮಾದಲ್ಲಿಪುಂಗ್ ಸುಕ್ ವಾಂಗ್ ಡು” ಪಾತ್ರಕ್ಕೆ ಸೋನಮ್ ವಾಂಗ್ಚುಕ್ ಅವರ ಬದುಕೇ ಪ್ರೇರಣೆ. ಹಾಗಾಗಿ ಇವರ ದೇಶಪ್ರೇಮ ಪ್ರಶ್ನಾತೀತ.

ವಾಂಗ್ ಚುಕ್ ಬಂಧನ ಕೇಂದ್ರ ಸರಕಾರಕ್ಕೆ ಮುಖಭಂಗ

       ಇತ್ತೀಚಿಗೆ ಲಡಾಕ್ ಗೆ ಪ್ರತ್ಯೇಕ ರಾಜ್ಯ ಸ್ಥಾನಮಾನವನ್ನು ಆಗ್ರಹಿಸಿ ನಡೆದ ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿದ್ದರ ಹೊಣೆಗಾರಿಕೆಯನ್ನು ಸರಕಾರ ಇವರ ಮೇಲೆ ಹೊರಿಸಿ 2025 ಸೆಪ್ಟಂಬರ್ ನಲ್ಲಿ ಇವರನ್ನು ಬಂಧಿಸಿ ಆರು ತಿಂಗಳ ಕಾಲ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಇವರನ್ನು ರಾಜಸ್ಥಾನದ ಜೈಲಲ್ಲಿರಿಸಿತ್ತು. ಈ ಸಂಧರ್ಭದಲ್ಲಿ  ಪತ್ನಿ ಡಾ. ಗೀತಾಂಜಲಿಯವರು ಸುಪ್ರೀಂ ಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.  ಅರ್ಜಿಯ ವಿಚಾರಣೆಗಿಂತ ಮೊದಲೇ ಮಾರ್ಚ್ 14ರಂದು ವಾಂಗ್ ಚುಕ್ ಮೇಲಿನ ಆರೋಪವನ್ನು ಕೇಂದ್ರ ಸರಕಾರ ದಿಡೀರ್ ಆಗಿ ಕೈ ಬಿಟ್ಟು  ಬಿಡುಗಡೆಗೊಳಿಸಿತು. ಸುಪ್ರೀಂ ಕೋರ್ಟ್ ನಿಂದ ಛೀಮಾರಿಗೊಳಗಾಗಿ, ಮುಂದೆ ಆಗಬಹುದಾದ ಮುಖಭಂಗದಿಂದ ಕೇಂದ್ರ ಸರಕಾರ ಜಾರಿಕೊಂಡಿರುವುದು ಜಗ್ಗಾಜಾಹೀರು.

       ಏನೇ ಆಗಲಿ ಸೋನಮ್ ವಾಂಗ್ ಚುಕ್ ರ ಅಹವಾಲನ್ನು ಸರಕಾರ ಆಲಿಸಲಿ, ಶಿಕ್ಷಣ ಸಚಿವರು ನೈತಿಕ ಹೊಣೆಹೊತ್ತು ರಾಜಿನಾಮೆ ನೀಡಲಿ, ನೀಟ್ ಪರೀಕ್ಷೆ ಸಹಿತ ಇತರ ಪರೀಕ್ಷೆಗಳ  ಪ್ರಶ್ನೆ ಪತ್ರಿಕೆಗಳು ಸೋರಿಕಯಾಗದಂತೆ ಕಠಿಣ ನಿಯಮಗಳನ್ನು ಜಾರಿಗೆ ತರಲು ಮುಂದಾಗಲಿ. ಕೊನೆಯದಾಗಿ  ಸರಕಾರ ಪ್ರಜಾಪ್ರಭುತ್ವವನ್ನು ಅಣಕಿಸದಿರಲಿ.