ದೇಶ ವಿದೇಶ

ಜಂತರ್ ಮಂತರ್ ನಲ್ಲಿ 21ನೇ ದಿನ ಉಪವಾಸ ಸತ್ಯಾಗ್ರಹದಲ್ಲಿದ್ದ ಸೋನಮ್ ವಾಂಗ್‌ಚುಕ್ ರನ್ನು ಬಲವಂತವಾಗಿ ಕರೆದೊಯ್ದ ದೆಹಲಿ ಪೊಲೀಸರು.


ಜಂತರ್ ಮಂತರ್ ನಲ್ಲಿ 21ನೇ  ದಿನ ಉಪವಾಸ ಸತ್ಯಾಗ್ರಹದಲ್ಲಿದ್ದ ಸೋನಮ್ ವಾಂಗ್ ಚುಕ್ ರನ್ನು  ಬಲವಂತವಾಗಿ ಕರೆದೊಯ್ದ ದೆಹಲಿ ಪೊಲೀಸರು.

ನವದೆಹಲಿ: ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿರುವ ನೀಟ್ (NEET) ಪರೀಕ್ಷಾ ಅಕ್ರಮದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ಪದತ್ಯಾಗ ಮಾಡಬೇಕೆಂದು ಆಗ್ರಹಿಸಿ ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಕಳೆದ 20 ದಿನಗಳಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಖ್ಯಾತ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ದೆಹಲಿ ಪೊಲೀಸರು ಶನಿವಾರ ಮುಂಜಾನೆ ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜುಲೈ 20 ರಂದು ವಾಂಗ್‌ಚುಕ್ ಮತ್ತು ಅವರ ಬೆಂಬಲಿಗರು ಸಂಸತ್ ಭವನಕ್ಕೆ ಬೃಹತ್ ಮೆರವಣಿಗೆ ನಡೆಸಲು ಯೋಜನೆ ರೂಪಿಸಿದ್ದ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆದಿದ್ದು, ಪ್ರತಿಭಟನಾ ಸ್ಥಳದಲ್ಲಿ ಸದ್ಯ ಭಾರಿ ಪ್ರಮಾಣದ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

ಲಡಾಖ್ ಮೂಲದ ಖ್ಯಾತ ಶಿಕ್ಷಣ ಸುಧಾರಕ ಹಾಗೂ ಇಂಜಿನಿಯರ್ ಸೋನಮ್ ವಾಂಗ್‌ಚುಕ್ ಅವರು ಪರೀಕ್ಷಾ ಅಕ್ರಮಗಳ ವಿರುದ್ಧ ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಆದರೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಕ್ಷೀಣಿಸುತ್ತಿರುವುದನ್ನು ಗಮನಿಸಿದ ದೆಹಲಿ ಹೈಕೋರ್ಟ್ ಆಡಳಿತಕ್ಕೆ ಕೆಲವು ಮಹತ್ವದ ನಿರ್ದೇಶನಗಳನ್ನು ನೀಡಿತ್ತು.

ಕೋರ್ಟ್ ಆದೇಶದಂತೆ ಪೊಲೀಸ್ ಆಕ್ಷನ್:

ಸೋನಮ್ ವಾಂಗ್‌ಚುಕ್ ಅವರ ಜೀವರಕ್ಷಣೆ ಅತ್ಯಂತ ಮುಖ್ಯವಾಗಿದ್ದು, ಅವರ ಆರೋಗ್ಯದ ಸ್ಥಿತಿಗತಿಯನ್ನು ಪ್ರತಿದಿನ ತಪಾಸಣೆ ನಡೆಸಬೇಕು ಮತ್ತು ವೈದ್ಯರ ಸಲಹೆಯ ಮೇರೆಗೆ ತಕ್ಷಣವೇ ವೈದ್ಯಕೀಯ ನೆರವು ನೀಡಬೇಕು ಎಂದು ಹೈಕೋರ್ಟ್ ವಿಭಾಗೀಯ ಪೀಠವು ಪೊಲೀಸರಿಗೆ ಸೂಚಿಸಿತ್ತು. ಈ ಆದೇಶದ ಅನ್ವಯ ಹಾಗೂ ವಾಂಗ್‌ಚುಕ್ ಅವರ ಶಾರೀರಿಕ ಸ್ಥಿತಿ ಹದಗೆಟ್ಟಿದ್ದರಿಂದ, ಅಗತ್ಯ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ದೆಹಲಿ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಈ ವೇಳೆ ಪ್ರತಿಭಟನಾಕಾರರು ತಡೆಯೊಡ್ಡಲು ಯತ್ನಿಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.

ಆತಂಕ ತಂದಿದೆ ವಾಂಗ್‌ಚುಕ್ ಹೆಲ್ತ್ ರಿಪೋರ್ಟ್!:

ದೆಹಲಿ ವೈದ್ಯಕೀಯ ಸಂಘದ ಡಾ. ಸತೀಶ್ ಲಾಂಬಾ ನೀಡಿರುವ ಹೆಲ್ತ್ ಬುಲೆಟಿನ್ ಪ್ರಕಾರ:

  • ನಿರಂತರ ಉಪವಾಸದಿಂದಾಗಿ ಸೋನಮ್ ವಾಂಗ್‌ಚುಕ್ ಅವರ ದೇಹದ ತೂಕ 56.55 ಕೆಜಿಗೆ ಇಳಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿಯೇ ಬರೋಬ್ಬರಿ 350 ಗ್ರಾಂ ತೂಕ ನಷ್ಟವಾಗಿದೆ.
  • ಅವರ ರಕ್ತದೊತ್ತಡ (BP) 108/68 ಇದ್ದು, ರಕ್ತದಲ್ಲಿನ ಸಕ್ಕರೆ ಮಟ್ಟ (Sugar Level) 70 ಮಿಗ್ರಾಂ/ಡಿಎಲ್ ಗೆ ಕುಸಿದಿದೆ.
  • ಅವರ ನಾಡಿಮಿಡಿತದ ವೇಗ ನಿಮಿಷಕ್ಕೆ 72 ಪಲ್ಸ್ ಇದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಒಗ್ಗೂಡಿದ ವಿರೋಧ ಪಕ್ಷಗಳ ನಾಯಕರು:

ಸೋನಮ್ ವಾಂಗ್‌ಚುಕ್ ಅವರ ಈ ಹೋರಾಟಕ್ಕೆ ದೇಶದ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಮುಕ್ತ ಬೆಂಬಲ ಸೂಚಿಸಿದ್ದಾರೆ. ಶುಕ್ರವಾರವಷ್ಟೇ ಜಂತರ್ ಮಂತರ್‌ನ ಪ್ರತಿಭಟನಾ ವೇದಿಕೆಗೆ ಭೇಟಿ ನೀಡಿದ್ದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಸಮಾಜವಾದಿ ಪಕ್ಷದ ಧುರೀಣ ಅಖಿಲೇಶ್ ಯಾದವ್, ಎನ್‌ಸಿಪಿಯ ಸುಪ್ರಿಯಾ ಸುಳೆ, ಸಂಸದೆ ಡಿಂಪಲ್ ಯಾದವ್, ಕಾಂಗ್ರೆಸ್ ಪ್ರಮುಖ ಪವನ್ ಖೇರಾ ಹಾಗೂ ಶಿವಸೇನೆಯ ಆದಿತ್ಯ ಠಾಕ್ರೆ ಅವರು ವಾಂಗ್‌ಚುಕ್ ಅವರ ಆರೋಗ್ಯ ವಿಚಾರಿಸಿ, ಹೋರಾಟಕ್ಕೆ ಸಾಥ್ ನೀಡಿದ್ದಾರೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿರುವ ಪ್ರತಿಭಟನಾಕಾರರು, ಆಸ್ಪತ್ರೆಗೆ ದಾಖಲಾಗಿರುವ ವಾಂಗ್‌ಚುಕ್ ಅವರ ಮುಂದಿನ ನಡೆ ಹಾಗೂ ಜುಲೈ 20 ರ ಸಂಸತ್ ಚಲೋ ಮೆರವಣಿಗೆಯ ಕುರಿತು ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.