- ಮೃತರ ಪೈಕಿ 18 ಮಹಿಳೆಯರು ಹಾಗೂ 9 ಪುರುಷರು ಸೇರಿರುವುದು ದೃಢ
- ಶೌಚಾಲಯದಲ್ಲಿ ಆಶ್ರಯ ಪಡೆಯಲು ಹೋಗಿ ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ ದುರ್ದೈವಿಗಳು
ಬ್ಯಾಂಕಾಕ್ (ಥಾಯ್ಲೆಂಡ್): ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನ ಪ್ರಸಿದ್ಧ ಪಬ್ ಹಾಗೂ ರೆಸ್ಟೋರೆಂಟ್ ಒಂದರಲ್ಲಿ ಸೋಮವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಅರ್ಧ ಗಂಟೆಯ ಸತತ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಪಬ್ ಒಳಗೆ ದೊಡ್ಡ ಮಟ್ಟದ ಪ್ರಾಣಹಾನಿ ಸಂಭವಿಸಿದೆ.
ಸ್ಥಳೀಯವಾಗಿ 'ರೊಂಗ್ ಬಿಯರ್ ನಾ ಲಾಟ್ ಫ್ರಾವೊ' ಎಂದು ಕರೆಯಲ್ಪಡುವ ಈ ಬಾರ್, ಬ್ಯಾಂಕಾಕ್‌ನ ಚತುಚಕ್ ಜಿಲ್ಲೆಯಲ್ಲಿದೆ. ಇದು ಈ ಭಾಗದ ಅತ್ಯಂತ ಜನಪ್ರಿಯ ಮನರಂಜನಾ ಸ್ಥಳಗಳಲ್ಲಿ ಒಂದಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಹೊಗೆಯಿಂದ ತಪ್ಪಿಸಿಕೊಳ್ಳಲು ಹೋಗಿ ಟ್ರ್ಯಾಪ್ ಆದ ಗ್ರಾಹಕರು:
ದುರಂತದ ಭೀಕರತೆ ಎಷ್ಟು ತೀವ್ರವಾಗಿತ್ತೆಂದರೆ, ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಗ್ರಾಹಕರು ಪ್ರಾಣ ಉಳಿಸಿಕೊಳ್ಳಲು ಕಿರುಚುತ್ತಾ ಮುಂಭಾಗದ ಪ್ರಧಾನ ದ್ವಾರದ ಮೂಲಕ ಹೊರಗೆ ಓಡಿಬರಲು ಯತ್ನಿಸಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟರ್) ನಲ್ಲೂ ಹರಿದಾಡುತ್ತಿವೆ. ಪಬ್‌ನಲ್ಲಿದ್ದ ಸಂಗೀತಗಾರರೊಬ್ಬರ ಪ್ರಕಾರ, ಅಲ್ಲಿನ ಕಟ್-ಔಟ್ ಸ್ವಿಚ್‌ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತು. ನೋಡನೋಡುತ್ತಿದ್ದಂತೆಯೇ ಇಡೀ ಕಟ್ಟಡಕ್ಕೆ ಜ್ವಾಲೆ ವ್ಯಾಪಿಸಿದೆ.
ಬೆಂಕಿಯ ಜ್ವಾಲೆ ಮತ್ತು ದಟ್ಟವಾದ ಹೊಗೆಯಿಂದ ರಕ್ಷಿಸಿಕೊಳ್ಳಲು ಅನೇಕ ಗ್ರಾಹಕರು ಕಟ್ಟಡದ ಹಿಂಭಾಗದಲ್ಲಿದ್ದ ಶೌಚಾಲಯಕ್ಕೆ ಓಡಿ ಹೋಗಿ ಆಶ್ರಯ ಪಡೆದಿದ್ದಾರೆ. ಆದರೆ, ಅಲ್ಲಿಂದ ಹೊರಬರಲು ಯಾವುದೇ ದಾರಿ ಇಲ್ಲದೆ ಎಲ್ಲರೂ ಒಳಗೆಯೇ ಸಿಲುಕಿಕೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗೆ ಅತಿ ಹೆಚ್ಚು ಶವಗಳು ಈ ಶೌಚಾಲಯದ ಭಾಗದಲ್ಲೇ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಹಾಗೂ ಗವರ್ನರ್ ಭೇಟಿ:
ಘಟನೆಯ ಕುರಿತು ಮಾಹಿತಿ ನೀಡಿರುವ ಥಾಯ್ಲೆಂಡ್ ಪ್ರಧಾನಿ ಅನುತಿನ್ ಚಾರ್ನ್‌ವಿರಕುಲ್, ದುರಂತದ ಸ್ಥಳದಿಂದ ಸದ್ಯ 27 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಗಾಯಗೊಂಡಿರುವ 60ಕ್ಕೂ ಅಧಿಕ ಜನರನ್ನು ತುರ್ತು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಮೃತಪಟ್ಟವರಲ್ಲಿ 18 ಮಹಿಳೆಯರು ಮತ್ತು 9 ಪುರುಷರು ಸೇರಿದ್ದಾರೆ. ಬೆಂಕಿ ಅನಾಹುತಕ್ಕೆ ನಿಖರ ಕಾರಣವೇನು ಎಂಬುದರ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.
ಈ ಮಧ್ಯೆ, ಬ್ಯಾಂಕಾಕ್ ಗವರ್ನರ್ ಚಾಟ್‌ಚಾರ್ಟ್ ಸಿಟ್ಟಿಪುಂಟ್ ಅವರು ದುರಂತ ನಡೆದ ಪಬ್‌ಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಬ್‌ನ ಒಳಾಂಗಣ ವಿನ್ಯಾಸಕ್ಕೆ ಬಳಸಲಾಗಿದ್ದ ಅಲಂಕಾರಿಕ ಸಾಮಗ್ರಿಗಳು ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವಂತದ್ದಾಗಿದ್ದರಿಂದಲೇ ಜ್ವಾಲೆಗಳು ಇಷ್ಟು ವೇಗವಾಗಿ ಇಡೀ ಕಟ್ಟಡಕ್ಕೆ ವ್ಯಾಪಿಸಲು ಮುಖ್ಯ ಕಾರಣ ಎಂದು ಅವರು ಪ್ರಾಥಮಿಕ ಅಂದಾಜಿನಲ್ಲಿ ತಿಳಿಸಿದ್ದಾರೆ. ಸದ್ಯ ಇಡೀ ಪ್ರದೇಶವನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆದಿದ್ದಾರೆ.
