ಕ್ರೈಂ

ಮಕ್ಕಳ ಅಶ್ಲೀಲ ವೀಡಿಯೊ ದೂರು ನೆಪದಲ್ಲಿ ಡಿಜಿಟಲ್ ಅರೆಸ್ಟ್: ಮಂಗಳೂರಿನಲ್ಲಿ 31 ಲಕ್ಷ ರೂ. ಆನ್‌ಲೈನ್ ದರೋಡೆ!

 




ಮಂಗಳೂರು: "ನಿಮ್ಮ ಹೆಸರಿನ ಸಿಮ್ ಕಾರ್ಡ್‌ನಿಂದ ಮಕ್ಕಳಿಗೆ ಅಶ್ಲೀಲ ಸಂದೇಶ ಹಾಗೂ ವೀಡಿಯೊಗಳನ್ನು ಕಳುಹಿಸಲಾಗಿದ್ದು, ನಿಮ್ಮ ಮೇಲೆ ಹತ್ತಾರು ದೂರುಗಳು ಬಂದಿವೆ" ಎಂದು ಭೀತಿ ಹುಟ್ಟಿಸಿ ಹಿರಿಯ ನಾಗರಿಕರೊಬ್ಬರನ್ನು 'ಡಿಜಿಟಲ್ ಅರೆಸ್ಟ್' ಮಾಡುವ ಮೂಲಕ ಬರೋಬ್ಬರಿ ₹31 ಲಕ್ಷ ದೋಚಿರುವ ಆಘಾತಕಾರಿ ಘಟನೆ ಮಂಗಳೂರಿನಲ್ಲಿ ನಡೆದಿದೆ.


64 ವರ್ಷದ ಸಂತ್ರಸ್ತ ಹಿರಿಯ ನಾಗರಿಕರು ನೀಡಿದ ದೂರಿನ ಆಧಾರದಲ್ಲಿ ಮಂಗಳೂರಿನ ಸಿಇಎನ್‌ (CEN) ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಭಯ ಹುಟ್ಟಿಸಿ ಹಂತ ಹಂತವಾಗಿ ಸೈಬರ್ ಬಲೆ ಹೆಣೆದ ವಂಚಕರು:

ಅಧಿಕಾರಿಯ ಹುಸಿ ಪರಿಚಯ ಮತ್ತು ಬೆದರಿಕೆ: ಕಳೆದ ಜುಲೈ 15, 2026 ರಂದು ಮಧ್ಯಾಹ್ನ 12.30 ರ ಸುಮಾರಿಗೆ ಸಂತ್ರಸ್ತರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ, ತಾನು 'ಡಾಟಾ ಪ್ರೊಟೆಕ್ಷನ್ ಬೋರ್ಡ್ ಆಫ್ ಇಂಡಿಯಾ'ದ ಅಧಿಕಾರಿ ಆರ್.ಕೆ. ಚೌಧರಿ ಎಂದು ಹೇಳಿಕೊಂಡಿದ್ದನು. "ನಿಮ್ಮ ಹೆಸರಿನಲ್ಲಿ ಪಡೆದ ಹೊಸ ಸಿಮ್‌ನಿಂದ ಮಕ್ಕಳಿಗೆ ಅಶ್ಲೀಲ ವೀಡಿಯೊಗಳನ್ನು ಕಳುಹಿಸಲಾಗಿದೆ. ನಿಮ್ಮ ವಿರುದ್ಧ 20 ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ" ಎಂದು ಬೆದರಿಸಿದ್ದನು.


ಎನ್‌ಐಎ ಮತ್ತು ಸೈಬರ್ ಸೆಲ್ ಹೆಸರು ದುರ್ಬಳಕೆ: ಬಳಿಕ ಕರೆಯನ್ನು ‘ಮುಂಬೈ ಸೈಬರ್ ಸೆಲ್ (NIA)’ ಗೆ ಸಂಪರ್ಕಿಸಲಾಗಿದೆ ಎಂದು ನಂಬಿಸಿ, ನಿಮ್ಮ ವಿರುದ್ಧ ಎಫ್.ಐ.ಆರ್ ಹಾಗೂ ಹಲವು ರಾಜ್ಯಗಳಲ್ಲಿ ಕೇಸ್‌ಗಳಿವೆ ಎಂದು ಆತಂಕ ಸೃಷ್ಟಿಸಲಾಯಿತು. ತರುವಾಯ ಸಂಜಯ್ ಎಂಬಾತ ವಿಡಿಯೋ ಕರೆ ಮಾಡಿ ಹೆದರಿಸಿದರೆ, ಜುಲೈ 16 ರಂದು ಮತ್ತೊಬ್ಬ ವಂಚಕ ವಿಡಿಯೋ ಕರೆ ಮಾಡಿ ಸಂತ್ರಸ್ತರ ಆಸ್ತಿ ಮತ್ತು ಬ್ಯಾಂಕ್ ಖಾತೆಗಳ ಸಂಪೂರ್ಣ ವಿವರಗಳನ್ನು ಪಡೆದುಕೊಂಡಿದ್ದನು.


ಅರೆಸ್ಟ್ ವಾರಂಟ್ ನೆಪದಲ್ಲಿ ಮೊದಲ ಹಂತದ ಹಣ ವಸೂಲಿ: ಜುಲೈ 17 ರಂದು ಮತ್ತೆ ವಿಡಿಯೋ ಕರೆ ಮಾಡಿದ ಆರೋಪಿಗಳು, "ನಿಮ್ಮ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ. ತಕ್ಷಣವೇ ನಾವು ನೀಡುವ ಖಾತೆಗೆ ಹಣ ವರ್ಗಾಯಿಸಿ" ಎಂದು ಎಚ್ಚರಿಸಿದ್ದರು. ಇದರಿಂದ ಭಯಗೊಂಡ ಸಂತ್ರಸ್ತರು ಆರೋಪಿಗಳು ಸೂಚಿಸಿದ ಐಸಿಐಸಿಐ (ICICI) ಬ್ಯಾಂಕ್ ಖಾತೆಗೆ RTGS ಮೂಲಕ ₹3,80,000/- ಜಮಾ ಮಾಡಿದ್ದರು.


ಚಿನ್ನಾಭರಣ ಅಡವಿಟ್ಟು ₹27.20 ಲಕ್ಷ ವರ್ಗಾವಣೆ! ಜುಲೈ 18 ರಂದು ವಾಟ್ಸಪ್ ಸಂದೇಶ ಕಳುಹಿಸಿದ ವಂಚಕರು, ಮನೆಯಲ್ಲಿರುವ ಚಿನ್ನಾಭರಣಗಳನ್ನು ಬ್ಯಾಂಕಿನಲ್ಲಿ ಅಡಮಾನವಿಟ್ಟು ಆ ಹಣವನ್ನೂ ಕಳುಹಿಸುವಂತೆ ಒತ್ತಡ ಹೇರಿದ್ದರು. ವಂಚಕರ ಜಾಲಕ್ಕೆ ಸಿಲುಕಿದ ಹಿರಿಯ ನಾಗರಿಕರು ಜುಲೈ 20 ರಂದು ತಮ್ಮ ಮನೆಯಲ್ಲಿದ್ದ ಚಿನ್ನವನ್ನು ಮುತ್ತೂಟ್ ಫೈನಾನ್ಸ್‌ನಲ್ಲಿ ಅಡವಿಟ್ಟು ಪಡೆದ ₹29 ಲಕ್ಷದಲ್ಲಿ ₹27,20,000/- ಹಣವನ್ನು ಆರೋಪಿಗಳ ಇನ್ನೊಂದು ಐಸಿಐಸಿಐ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ.


ಸಿಇಎನ್ ಠಾಣೆಯಲ್ಲಿ ದೂರು: ಸೈಬರ್ ತನಿಖೆ ಚುರುಕು

ಡಿಜಿಟಲ್ ಅರೆಸ್ಟ್ ನಾಟಕವಾಡಿ ಆನ್‌ಲೈನ್ ಮೂಲಕ ಒಟ್ಟು ₹31,00,000/- ಹಣವನ್ನು ಹಂತ ಹಂತವಾಗಿ ಕಸಿದುಕೊಂಡ ಬಳಿಕ ಸಂತ್ರಸ್ತರಿಗೆ ತಾವು ಬೃಹತ್ ವಂಚನೆಗೆ ಒಳಗಾಗಿರುವುದು ಮನವರಿಕೆಯಾಗಿದೆ. ಕೂಡಲೇ ಅವರು ಮಂಗಳೂರು ಸಿಇಎನ್ ಠಾಣೆಯ ಮೆಟ್ಟಿಲೇರಿದ್ದು, ಪೊಲೀಸರು ವಂಚಕರು ಬಳಸಿದ ಮೊಬೈಲ್ ಸಂಖ್ಯೆಗಳು ಹಾಗೂ ಬ್ಯಾಂಕ್ ಖಾತೆಗಳ ವಿವರಗಳನ್ನಿಟ್ಟುಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.


ಎಚ್ಚರಿಕೆ: "ಕಾನೂನಿನಲ್ಲಿ 'ಡಿಜಿಟಲ್ ಅರೆಸ್ಟ್' ಎಂಬ ಯಾವುದೇ ಪ್ರಕ್ರಿಯೆ ಇಲ್ಲ. ಸಿಬಿಐ, ಎನ್‌ಐಎ ಅಥವಾ ಪೋಲೀಸ್ ಇಲಾಖೆಯಾಗಲಿ ವಿಡಿಯೋ ಕರೆ ಮೂಲಕ ವಿಚಾರಣೆ ನಡೆಸಿ ಹಣ ವರ್ಗಾಯಿಸಲು ಕೋರುವುದಿಲ್ಲ. ಅಶ್ಲೀಲ ವೀಡಿಯೊ, ಕೇಸ್ ಅಥವಾ ವಾರಂಟ್ ಹೆಸರಿನಲ್ಲಿ ಯಾವುದೇ ಕರೆ ಬಂದರೂ ಆತಂಕಪಡದೆ ತಕ್ಷಣವೇ '1930' ಸೈಬರ್ ಹೆಲ್ಪ್‌ಲೈನ್ ಸಂಖ್ಯೆಗೆ ಕರೆ ಮಾಡಿ ದೂರು ನೀಡಿ."