![]() |
| photo courtesy:ETV BHARAT |
ವಯನಾಡು: ಕೇರಳದ ವಯನಾಡಿನ ಮೆಪ್ಪಾಡಿ ಸಮೀಪದ ಕಲ್ಲಾಡಿ ಬಳಿ ಸಂಭವಿಸಿದ ಭೀಕರ ಭೂಕುಸಿತದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ನಾಪತ್ತೆಯಾದವರಿಗಾಗಿ ನಡೆಸಲಾಗುತ್ತಿದ್ದ ಸುದೀರ್ಘ ಶೋಧ ಕಾರ್ಯದ ವೇಳೆ ಇಂದು ಮತ್ತೆ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.
ಈ ಕುರಿತು ಜಂಟಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಕೇರಳದ ಸಚಿವರಾದ ಎ.ಪಿ. ಅನಿಲ್ ಕುಮಾರ್ ಹಾಗೂ ಟಿ. ಸಿದ್ದಿಕಿ ಅವರು, ಇವತ್ತು ಬೆಳಗ್ಗೆ ಕಾರ್ಯಾಚರಣೆ ತೀವ್ರಗೊಳಿಸಿದಾಗ ವಲಯ ಒಂದರಲ್ಲಿ ಒಂದು ಶವ ಸಿಕ್ಕರೆ, ನದಿಯ ಪಾತ್ರದಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಸಿಕ್ಕಿರುವ ಎರಡು ಶವಗಳನ್ನು ಸದ್ಯ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಇನ್ನು ನಾಪತ್ತೆಯಾಗಿರುವ ಮೂವರು ಕಾರ್ಮಿಕರಿಗಾಗಿ ವಲಯ 1, ವಲಯ 2 ಹಾಗೂ ನದಿಯ ಆಸುಪಾಸಿನಲ್ಲಿ ರಕ್ಷಣಾ ಪಡೆಗಳು ಜಾಲಾಡುತ್ತಿವೆ.
ಗಾಯಾಳುಗಳ ಸ್ಥಿತಿ:
ದುರಂತದಲ್ಲಿ ಸಿಲುಕಿ ಗಾಯಗೊಂಡಿದ್ದ 10 ಮಂದಿಯ ಪೈಕಿ ಈಗಾಗಲೇ ಮೂವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಉಳಿದವರಲ್ಲಿ ನಾಲ್ವರ ಆರೋಗ್ಯ ಸ್ಥಿರವಾಗಿದ್ದರೂ, ತೀವ್ರ ನಿಗಾ ಘಟಕದಲ್ಲಿರುವ (ICU) ಮೂವರ ಪೈಕಿ ಇಬ್ಬರ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ಸಚಿವ ಸಿದ್ದಿಕಿ ವಿವರಿಸಿದ್ದಾರೆ.
ಸ್ಥಳಕ್ಕೆ ಗಣ್ಯರ ಭೇಟಿ:
ದುರಂತದ ತೀವ್ರತೆ ಹಿನ್ನೆಲೆಯಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಹಾಗೂ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಅವರು ಪಕ್ಷದ ಪ್ರಮುಖರಾದ ಎಂ.ವಿ. ಗೋವಿಂದನ್ ಮತ್ತು ಎಂ.ವಿ. ಜಯರಾಜನ್ ಅವರೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸಂತ್ರಸ್ತರ ಪರಿಹಾರ ಕೇಂದ್ರಗಳಿಗೆ ತೆರಳಿ ಧೈರ್ಯ ತುಂಬಿದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಇದಕ್ಕೂ ಮುನ್ನ ಬುಧವಾರವಷ್ಟೇ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಸ್ಥಳಕ್ಕೆ ಭೇಟಿ ನೀಡಿ, ಈ ದುರಂತದ ಕುರಿತು ಉನ್ನತ ಮಟ್ಟದ ಸಮಗ್ರ ತನಿಖೆಗೆ ಆದೇಶಿಸಿದ್ದರು.
ಮಾನವ ನಿರ್ಮಿತ ದುರಂತ?:
ಕಳೆದ ಜುಲೈ 7ರಂದು ವಯನಾಡು ಮತ್ತು ಕೋಯಿಕ್ಕೋಡ್ ಜಿಲ್ಲೆಗಳನ್ನು ಬೆಸೆಯುವ ಅನಕ್ಕೊಂಪೊಯಿಲ್-ಮೇಪ್ಪಾಡಿ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದ್ದ ಜಾಗದ ಬಳಿ ಈ ಭೂಕುಸಿತ ಸಂಭವಿಸಿತ್ತು. ಸುರಂಗ ನಿರ್ಮಾಣಕ್ಕಾಗಿ ತೆಗೆದು ರಾಶಿ ಹಾಕಲಾಗಿದ್ದ ಬೃಹತ್ ಪ್ರಮಾಣದ ಮಣ್ಣು, ಸುರಿದ ಭಾರಿ ಮಳೆಗೆ ತತ್ತರಿಸಿ ಕುಸಿದು ಬಿದ್ದಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಘಟನೆ ಬೆನ್ನಲ್ಲೇ ಕಲ್ಲಪೆಟ್ಟದ ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನು ಈ ಇಡೀ ಘಟನೆಯನ್ನು ಕೇರಳ ಸರ್ಕಾರವು "ಮಾನವ ನಿರ್ಮಿತ ದುರಂತ" ಎಂದು ಅಧಿಕೃತವಾಗಿ ಕರೆದಿದೆ.
