ಕ್ರೈಂ

ಮೇರಿಹಿಲ್ ಮನೆ ಕಳ್ಳತನದ ಆರೋಪಿ ಬಲೆಗೆ: ಸಿಕ್ಕಿಬಿದ್ದ ಯುಪಿ ಮೂಲದ ಸೀಲಿಂಗ್ ಕೆಲಸಗಾರ; 6.37 ಲಕ್ಷ ರೂ. ಮೌಲ್ಯದ ಚಿನ್ನದ ಒಡವೆಗಳು ರಿಕವರಿ!

 


ಮಂಗಳೂರು: ಬಂದರು ನಗರ ಮಂಗಳೂರಿನ ಮೇರಿಹಿಲ್ ಬಾಂದೋಟ್ಟು (ಕೊಪ್ಪಳಕಾಡು) ನಿವಾಸಿಯೊಬ್ಬರ ಮನೆಯಲ್ಲಿ ಸೀಲಿಂಗ್ ಕಾಮಗಾರಿ ನೆಪದಲ್ಲಿ ನಡೆದಿದ್ದ ಭಾರಿ ಚಿನ್ನಾಭರಣ ಕಳ್ಳತನ ಕೃತ್ಯವನ್ನು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ಯಶಸ್ವಿಯಾಗಿ ಭೇದಿಸಿದ್ದಾರೆ. ದೂರು ಸಲ್ಲಿಕೆಯಾದ 24 ಗಂಟೆಗಳ ಅವಧಿಯಲ್ಲೇ ಭೇದಿಸಿರುವ ಪೊಲೀಸರು, ಉತ್ತರ ಪ್ರದೇಶ ಮೂಲದ ಶಂಕಿತ ಕೆಲಸಗಾರನನ್ನು ಸೀದಾ ಕಂಬಿಯೆಣಿಸುವಂತೆ ಮಾಡಿದ್ದಾರೆ.

ಫಾಲ್ಸ್ ಸೀಲಿಂಗ್ ನೆಪದಲ್ಲಿ ನಡೆದಿದ್ದ ಕೈಚಳಕ:

ಜುಲೈ 6 ರಿಂದ ಮೇರಿಹಿಲ್ 'ಶ್ರೀದೇವಿ ನಿವಾಸ'ದಲ್ಲಿ ಕೊಠಡಿ ಛಾವಣಿ ಹಾಗೂ ಹಾಲ್ ಸೀಲಿಂಗ್ ನವೀಕರಣ ಕೆಲಸಗಳು ನಡೆಯುತ್ತಿದ್ದವು. ವೇಳೆ ಬೆಡ್ರೂಮ್ನಲ್ಲಿದ್ದ ಕಬ್ಬಿನದ ಟೇಬಲ್ ಡ್ರಾವರ್ನಲ್ಲಿ ಇರಿಸಲಾಗಿದ್ದ ಪರ್ಸ್ನಿಂದ 20 ಗ್ರಾಂ ಚಿನ್ನದ ಕಡಗ, 17 ಗ್ರಾಂ ತೂಕದ ಚಿನ್ನದ ಚೈನ್, 8 ಗ್ರಾಂ ಮತ್ತು 4 ಗ್ರಾಂ ತೂಕದ ಎರಡು ಚಿನ್ನದ ಉಂಗುರಗಳು ಹಾಗೂ ಗೋಲ್ಡ್ ಕೊಟೆಡ್ ವಾಚ್ಸೇರಿದಂತೆ ಬರೋಬ್ಬರಿ 6,37,000 ರೂಪಾಯಿ ಬೆಲೆಬಾಳುವ ಆಭರಣಗಳು ಕಳವಾಗಿದ್ದವು. ಸಂಬಂಧ ಸಂತ್ರಸ್ತರು ನೀಡಿದ ದೂರಿನನ್ವಯ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ (.ಕ್ರ 68/2026, ಕಲಂ 305 BNS) ಎಫ್ಐಆರ್ ದಾಖಲಾಗಿತ್ತು.

ಅನುಮಾನ ಮೂಡಿಸಿದ್ದ ಕೆಲಸಗಾರ - ತನಿಖೆಯಲ್ಲಿ ಸತ್ಯ ಬಟಾಬಯಲು:

ಪ್ರಕರಣದ ಬೆನ್ನತ್ತಿದ ಇನ್ಸ್ಪೆಕ್ಟರ್ ಡಿ.ಆರ್. ಮಂಜಪ್ಪ ಹಾಗೂ ಸಬ್ಇನ್ಸ್ಪೆಕ್ಟರ್ ಅರುಣ್ ಕುಮಾರ್ ಡಿ. ನೇತೃತ್ವದ ತನಿಖಾ ತಂಡವು, ಮನೆಗೆ ಕೆಲಸಕ್ಕೆ ಬಂದು ಹೋಗಿದ್ದ ಎಲ್ಲಾ ಕಾರ್ಮಿಕರನ್ನು ಕರೆಸಿ ವಿಚಾರಣೆ ನಡೆಸಿತು. ವೇಳೆ ಕೆಲಸಕ್ಕೆ ಬಂದಿದ್ದ ಮೇಸ್ತ್ರಿ ಜಹೀರುದ್ದೀನ್ (24) ಎಂಬಾತನನ್ನು ತೀವ್ರವಾಗಿ ಪ್ರಶ್ನಿಸಿದಾಗ, ಕಳ್ಳತನದ ರಹಸ್ಯ ಬಯಲಾಗಿದೆ.

ಮೂಲತಃ ಉತ್ತರ ಪ್ರದೇಶದ ಬಲರಾಮ್ಪುರ ಜಿಲ್ಲೆಯವನಾಗಿದ್ದು, ಪ್ರಸ್ತುತ ಮಂಗಳೂರಿನ ಬಂದರು ಅಜಿಜುದ್ದೀನ್ ರಸ್ತೆಯಲ್ಲಿ ವಾಸವಿದ್ದ ಈತ, ಕೆಲಸದ ವೇಳೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಡ್ರಾವರ್ನಿಂದ ಒಡವೆಗಳನ್ನು ಕದ್ದು ಬಚ್ಚಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ.

ಎಲ್ಲಾ ಒಡವೆಗಳು ವಶ - ಕೋರ್ಟ್ಗೆ ಹಾಜರು:

ಬಂಧಿತ ಆರೋಪಿ ನೀಡಿದ ಸುಳಿವು ಆಧರಿಸಿ ಕಳವಾಗಿದ್ದ ಒಟ್ಟು 49 ಗ್ರಾಂ ತೂಕದ ಸಂಪೂರ್ಣ ಚಿನ್ನದ ಆಭರಣಗಳು ಹಾಗೂ ವಾಚ್ ಅನ್ನು ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.