ಗ್ಯಾಂಗ್ಟಾಕ್: ಈಶಾನ್ಯ ರಾಜ್ಯ ಸಿಕ್ಕಿಂನಲ್ಲಿ ಭೀಕರ ಕೈಗಾರಿಕಾ ದುರಂತವೊಂದು ಸಂಭವಿಸಿದೆ. ನಾಮ್ಚಿ ಜಿಲ್ಲೆಯ ಜೋಲುಂಗೆ ಸಮೀಪದ ಸಮರ್ದುಂಗ್ನಲ್ಲಿ ನಿರ್ಮಾಣ ಹಂತದಲ್ಲಿದ್ದ ಬೃಹತ್ ಸುರಂಗದೊಳಗೆ ಮಂಜೂರಾಗಿದ್ದ ವಿಷಾನಿಲ ಸ್ಫೋಟಗೊಂಡು ಭಾರಿ ಭೂಕುಸಿತ ಉಂಟಾಗಿದೆ. ಘಟನೆಯಲ್ಲಿ ಇದುವರೆಗೆ 8 ಜನರು ದಾರುಣವಾಗಿ ಮೃತಪಟ್ಟಿದ್ದು, ಪ್ರವೇಶ ದ್ವಾರ ಸಂಪೂರ್ಣ ಬಂದ್ ಆಗಿರುವುದರಿಂದ ಸುರಂಗದೊಳಗೆ ಸುಮಾರು 27ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಭೀತಿ ಎದುರಾಗಿದೆ. ಸ್ಥಳದಲ್ಲಿ ಎನ್ಡಿಆರ್ಎಫ್ ಹಾಗೂ ಪಡೆಯಿಂದ ಸಮರೋಪಾದಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಅನಿಲ ಸೋರಿಕೆ ಮತ್ತು ಸ್ಫೋಟದ ದುರಂತ:
ಸಮರ್ಡಾಂಗ್ ಸುರಂಗ ಮಾರ್ಗದಲ್ಲಿ ಸೋಮವಾರ ಮಧ್ಯಾಹ್ನ ನಿರಂತರ ಕೆಲಸ ಸಾಗುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಅನಿಲ ಸೋರಿಕೆಯಾಗುತ್ತಿರುವ ಬಗ್ಗೆ ವರದಿಯಾಗಿತ್ತು. ಆದರೆ ನೋಡನೋಡುತ್ತಿದ್ದಂತೆ ಜಲಾವೃತಗೊಂಡು ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಸುರಂಗದ ಒಳಭಾಗದಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿ, ಬೆಟ್ಟದ ಬಂಡೆ ಹಾಗೂ ಮಣ್ಣು ಕುಸಿದು ಸುರಂಗದ ಏಕೈಕ ಪ್ರವೇಶ ದ್ವಾರವು ಸಂಪೂರ್ಣವಾಗಿ ಮುಚ್ಚಿಹೋಗಿದೆ. ಪರಿಣಾಮ ಒಳಗೆ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು ಹೊರಬರಲಾಗದೆ ಸಿಲುಕಿಕೊಂಡಿದ್ದಾರೆ.
ಆಸ್ಪತ್ರೆಗೆ ಶವಗಳ ರವಾನೆ - ರಕ್ಷಣಾ ಪಡೆಗಳ ಕಸರತ್ತು:
ಘಟನೆಯಲ್ಲಿ ಮೃತಪಟ್ಟ 8 ಜನರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಸಿಂಗ್ಟಮ್ ಜಿಲ್ಲಾ ಆಸ್ಪತ್ರೆ, ಗ್ಯಾಂಗ್ಟಾಕ್ನ ಎಸ್ಟಿಎನ್ಎಂ ಆಸ್ಪತ್ರೆ ಹಾಗೂ ನಾಮ್ಚಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ನಾಮ್ಚಿ ಜಿಲ್ಲಾಡಳಿತದ ನೇತೃತ್ವದಲ್ಲಿ ಎನ್ಡಿಆರ್ಎಫ್ (NDRF), ಎಸ್ಡಿಆರ್ಎಫ್ (SDRF), ಸಿಕ್ಕಿಂ ಪೊಲೀಸ್, ಅಗ್ನಿಶಾಮಕ ದಳ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಸುರಂಗ ಪ್ರವೇಶಿಸಿ ನಿರಂತರ ಶೋಧನಾ ಕಾರ್ಯಾಚರಣೆ ನಡೆಸುತ್ತಿವೆ.
"ಸುರಂಗದೊಳಗೆ ಸದ್ಯ ಸುಮಾರು 27 ಕಾರ್ಮಿಕರು ಸಿಲುಕಿಕೊಂಡಿರುವ ಶಂಕೆ ಇದೆ. ಆದರೆ ಒಳಗಿನ ಸಂಪೂರ್ಣ ಪರಿಸ್ಥಿತಿ ಇನ್ನು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಎನ್ಡಿಆರ್ಎಫ್ ಪಡೆ ಒಳಗೆ ಕಾರ್ಯಾಚರಣೆ ಮುಗಿಸಿ ಹೊರಬಂದ ಮೇಲಷ್ಟೇ ಸಿಲುಕಿರುವವರ ನಿಖರ ಸಂಖ್ಯೆ ಮತ್ತು ಅವರ ಆರೋಗ್ಯ ಸ್ಥಿತಿಯ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ." – ಅನುಪ ತಮ್ಲಿಂಗ್, ಜಿಲ್ಲಾಧಿಕಾರಿ, ನಾಮ್ಚಿ.
ಸಿಎಂ ಜೊತೆ ಪ್ರಧಾನಿ ಮೋದಿ ಮಾತುಕತೆ - ಸಂಪೂರ್ಣ ನೆರವಿನ ಭರವಸೆ:
ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಬೆಳಿಗ್ಗೆ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ (ಗೋಲೆ) ಅವರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಈ ಕುರಿತು ಎಕ್ಸ್ (X) ಪೋಸ್ಟ್ ಹಂಚಿಕೊಂಡಿರುವ ಸಿಎಂ ತಮಾಂಗ್, "ಪ್ರಧಾನಿ ಮೋದಿ ಅವರು ಕರೆ ಮಾಡಿ ಸುರಂಗ ದುರಂತದ ಪರಿಸ್ಥಿತಿ ಹಾಗೂ ಪ್ರಸ್ತುತ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ವಿವರಗಳನ್ನು ಪಡೆದುಕೊಂಡರು. ಸಿಲುಕಿರುವ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಸಾಂತ್ವನ ಹೇಳಿರುವ ಪ್ರಧಾನಿಯವರು, ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ರೀತಿಯ ಬೆಂಬಲ ಹಾಗೂ ಕೇಂದ್ರ ರಕ್ಷಣಾ ಪಡೆಗಳ ತುರ್ತು ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ" ಎಂದು ತಿಳಿಸಿದ್ದಾರೆ.
ಪ್ರಸ್ತುತ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (SSDMA) ಇಡೀ ಘಟನೆಯ ಮೇಲ್ವಿಚಾರಣೆ ನಡೆಸುತ್ತಿದ್ದು, ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ಶ್ರಮಿಸುತ್ತಿದೆ.
