ಮಂಗಳೂರು: ಬಂದರು ನಗರಿ ಮಂಗಳೂರಿನ ಅತಿ ಜನನಿಬಿಡ ಪ್ರದೇಶವಾದ ಲಾಲ್ ಬಾಗ್ ಸಿಗ್ನಲ್ ಸಮೀಪ ಶನಿವಾರ ಮಧ್ಯಾಹ್ನ ಸಾರ್ವಜನಿಕರು ನೋಡನೋಡುತ್ತಿದ್ದಂತೆಯೇ ಭೀಕರ ಮಾರಣಾಂತಿಕ ದಾಳಿಯೊಂದು ನಡೆದಿದೆ. ಬೈಕ್‌ನಲ್ಲಿ ತೆರಳುತ್ತಿದ್ದ ಪ್ರಖ್ಯಾತ ರೌಡಿಶೀಟರ್ ವಿಕ್ಕಿ ಬಪ್ಪಾಲ್ ಎಂಬಾತನಿಗೆ ಅಪರಿಚಿತ ತಲವಾರ್‌ನಿಂದ ಕತ್ತರಿಸಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ.
ಚಲಿಸುವ ಬೈಕ್‌ನಲ್ಲೇ ಕತ್ತಿಗೆ ಬೀಸಿದ ತಲವಾರ್
ಶನಿವಾರ ಮಧ್ಯಾಹ್ನ ಸರಿ ಸುಮಾರು 1:45ರ ಸುಮಾರಿಗೆ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಲಾಲ್ ಬಾಗ್ ಸಿಗ್ನಲ್‌ನಲ್ಲಿ ಈ ನೆತ್ತರ ಆಟ ನಡೆದಿದೆ. ಬೈಕ್‌ನಲ್ಲಿ ತೆರಳುತ್ತಿದ್ದ ವಿಕ್ಕಿ ಬಪ್ಪಾಲ್‌ನನ್ನು ಹಿಂಬಾಲಿಸಿಕೊಂಡು ಬಂದ ಏಕಾಂಗಿ ಸವಾರನೊಬ್ಬ, ಸಾಗುತ್ತಿದ್ದ ವಾಹನದಲ್ಲೇ ಇದ್ದಕ್ಕಿದ್ದಂತೆ ತಲವಾರ್ ಹೊರತೆಗೆದು ಆತನ ಕತ್ತಿನ ಭಾಗಕ್ಕೆ ಬಲವಾಗಿ ಬೀಸಿದ್ದಾನೆ.
ದಾಳಿಯ ತೀವ್ರತೆಗೆ ವಿಕ್ಕಿ ಬೈಕ್ ಸಮೇತ ರಸ್ತೆಗೆ ಉರುಳಿ ಬಿದ್ದಿದ್ದು, ಕತ್ತಿನ ಭಾಗದಲ್ಲಿ ರಕ್ತದ ಕೋಡಿಯೇ ಹರಿದಿದೆ. ತಕ್ಷಣವೇ ಆತನನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಸದ್ಯ ಜೀವನ್ಮರಣ ಹೋರಾಟ ನಡೆಸುತ್ತಾ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಡ್ರಗ್ಸ್ ಜಾಲ ಹಾಗೂ ಹಳೆಯ ದ್ವೇಷದ ಶಂಕೆ
ಗಾಯಾಳು ವಿಕ್ಕಿ ಬಪ್ಪಾಲ್ ವಿರುದ್ಧ ಬರ್ಕೆ ಠಾಣೆಯಲ್ಲಿ ರೌಡಿಶೀಟ್ ಇದ್ದು, ಈತ ಇತ್ತೀಚೆಗೆ ನಿಷೇಧಿತ ಮಾದಕದ್ರವ್ಯ (ಡ್ರಗ್ಸ್) ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಹೀಗಾಗಿ ಪೊಲೀಸರು ಈತನ ಚಲನವಲನಗಳ ಮೇಲೆ ನಿರಂತರ ಕಣ್ಗಾವಲು ಇರಿಸಿದ್ದರು. ಮಾದಕ ವಸ್ತುಗಳ ವ್ಯಾಪಾರದಲ್ಲಿ ಉಂಟಾದ ಹಳೆಯ ವೈಷಮ್ಯವೇ ಈ ಕೃತ್ಯಕ್ಕೆ ಪ್ರಮುಖ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
ನಗರಾದ್ಯಂತ ರೆಡ್ ಅಲರ್ಟ್: ಪೊಲೀಸ್ ಕಮಿಷನರ್ ಕಟ್ಟುನಿಟ್ಟಿನ ಕ್ರಮ
ಘಟನೆ ನಡೆದ ತಕ್ಷಣವೇ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, "ವಿಕ್ಕಿ ಬಪ್ಪಾಲ್ ರೌಡಿಶೀಟರ್ ಆಗಿದ್ದು, ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದರಿಂದ ಆತನ ಮೇಲೆ ನಿಗಾ ವಹಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ನಗರದ ಎಲ್ಲಾ ತನಿಖಾಧಿಕಾರಿಗಳು ಹಾಗೂ ಗಡಿ ಚೆಕ್‌ಪೋಸ್ಟ್‌ಗಳನ್ನು ತಕ್ಷಣವೇ ಅಲರ್ಟ್ ಮಾಡಲಾಗಿದ್ದು, ಆರೋಪಿಯ ಬಂಧನಕ್ಕೆ ಜಾಲ ಬೀಸಲಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಗಳೂರು ಪೂರ್ವ ವಿಭಾಗದ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತನಿಖೆ ಆರಂಭವಾಗಿದೆ. ನಗರದ ಪ್ರಮುಖ ರಸ್ತೆಯಲ್ಲೇ ಹಗಲು ಹೊತ್ತಿನಲ್ಲಿ ನಡೆದಿರುವ ಈ ಘಟನೆಯಿಂದ ನಾಗರಿಕರು ಆತಂಕಗೊಂಡಿದ್ದಾರೆ.
