ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ವಿದ್ಯಾರ್ಥಿಗಳ ಹೋರಾಟಕ್ಕೆ ದೊರೆತ ಐತಿಹಾಸಿಕ ಜಯ : DSS
ಮಂಗಳೂರು : ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅವ್ಯವಹಾರಗಳ ವಿರುದ್ಧ ದೇಶದಾದ್ಯಂತ ವಿದ್ಯಾರ್ಥಿಗಳು, ಯುವಜನರು ಹಾಗೂ ವಿವಿಧ ಸಂಘಟನೆಗಳು ನಡೆಸಿದ ನಿರಂತರ ಪ್ರಜಾಪ್ರಭುತ್ವ ಮಾದರಿಯ ಹೋರಾಟವು ಮಹತ್ವದ ಫಲಿತಾಂಶವನ್ನು ನೀಡಿದೆ. ಹಠಮಾರಿ ಧೋರಣೆಯ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದು ವಿದ್ಯಾರ್ಥಿಗಳ ಸಂಘಟಿತ ಹೋರಾಟಕ್ಕೆ ಸಂದ ಜಯವಾಗಿದೆ.
ಈ ಹೋರಾಟವು ಕೇವಲ ಒಬ್ಬ ಸಚಿವರ ರಾಜೀನಾಮೆಗೆ ಸೀಮಿತವಾಗಿಲ್ಲ. ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯನ್ನು ರಾಷ್ಟ್ರದ ಗಮನಕ್ಕೆ ತಂದ ಪ್ರಜಾಪ್ರಭುತ್ವದ ಹೋರಾಟವಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನ್ಯಾಯವನ್ನು ಸ್ಥಾಪಿಸಬೇಕೆಂಬ ವಿದ್ಯಾರ್ಥಿಗಳ ಧ್ವನಿಗೆ ಇದು ದೊರೆತ ನೈತಿಕ ಗೆಲುವಾಗಿದೆ .
ಭಾರತದ ಸಂವಿಧಾನವು ನಾಗರಿಕರಿಗೆ ಶಾಂತಿಯುತವಾಗಿ ಪ್ರತಿಭಟಿಸುವ ಮತ್ತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ಸಂವಿಧಾನದ ಅನುಚ್ಛೇದ 19(1)(a) ಹಾಗೂ 19(1)(b) ಮೂಲಕ ನೀಡಿದೆ. ಆ ಸಂವಿಧಾನಬದ್ಧ ಹಕ್ಕಿನ ಚೌಕಟ್ಟಿನಲ್ಲೇ ವಿದ್ಯಾರ್ಥಿಗಳು ತಮ್ಮ ಹೋರಾಟವನ್ನು ನಡೆಸಿದ್ದಾರೆ.
ಇನ್ನು ಮುಂದೆ ನೀಟ್ ಸೇರಿದಂತೆ ಎಲ್ಲಾ ರಾಷ್ಟ್ರೀಯ ಪರೀಕ್ಷೆಗಳು ಸಂಪೂರ್ಣ ಪಾರದರ್ಶಕ, ನ್ಯಾಯಸಮ್ಮತ ಮತ್ತು ಅವ್ಯವಹಾರರಹಿತವಾಗಿ ನಡೆಯುವಂತೆ ಕೇಂದ್ರ ಸರ್ಕಾರ ಅಗತ್ಯ ಸುಧಾರಣೆಗಳನ್ನು ಜಾರಿಗೆ ತರಬೇಕು. ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಪಕ್ಷಪಾತವಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು.
ವಿದ್ಯಾರ್ಥಿಗಳ ಮೇಲಿನ ಪ್ರಕರಣಗಳನ್ನು ರದ್ದುಪಡಿಸಬೇಕು:
ವಿದ್ಯಾರ್ಥಿಗಳ, ಹೋರಾಟಗಾರರ ಮೇಲೆ ಹೂಡಿರುವ ಸುಳ್ಳು ಪ್ರಕರಣಗಳನ್ನು ತಕ್ಷಣ ರದ್ದುಪಡಿಸಬೇಕು, ಪ್ರತಿಭಟನಾ ಸಂದರ್ಭದಲ್ಲಿ ದೌರ್ಜನ್ಯ ನಡೆಸಿರುವ ಪೋಲೀಸರ ಮೇಲೆ ಕ್ರಮಕೈಗೊಳ್ಳಬೇಕು. ಪೋಲೀಸರ ವೇಷದಲ್ಲಿ ಕಾನೂನು ಕೈಗೆತ್ತಿಕೊಂಡವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು. ದೇಶದಾದ್ಯಂತ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದು ಹೋರಾಟದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳು, ಪೋಷಕರು ಹಾಗೂ ನಾಗರಿಕ ಸಂಘಟನೆಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಶಿಕ್ಷಣದಲ್ಲಿ ನ್ಯಾಯ, ಸಮಾನತೆ ಮತ್ತು ಪಾರದರ್ಶಕತೆ ಸ್ಥಾಪನೆಯಾಗಬೇಕೆಂದು ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ)ಯ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕರಾದ ಸದಾಶಿವ ಪಡುಬಿದ್ರಿ, ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ಸಂಘಟನಾ ಸಂಚಾಲಕರುಗಳಾದ ಕೃಷ್ಣಾನಂದ. ಡಿ, ರಘು ಎಕ್ಕಾರು, ಕಮಲಾಕ್ಷ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
