ದೇಶದಾದ್ಯಂತ ಅಕ್ರಮ ನೀಟ್ ಪರೀಕ್ಷೆಯ ವಿರುದ್ಧ ಹೋರಾಟ ನಡೆಸಿದ ಎಲ್ಲಾ ವಿದ್ಯಾರ್ಥಿ ಮಿತ್ರರಿಗೆ, ಯುವಜನತೆಗೆ ಮತ್ತು ಹೋರಾಟಗಾರರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
🖋️ ದಿನೇಶ್ ಹೆಗ್ಡೆ ಉಳೆಪಾಡಿ, ಖ್ಯಾತ ವಕೀಲರು, ಮಂಗಳೂರು
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕೇವಲ ಒಬ್ಬ ಸಚಿವರ ರಾಜೀನಾಮೆಯಲ್ಲ. ಅದು ಸಂಘಟಿತ ವಿದ್ಯಾರ್ಥಿ ಶಕ್ತಿಯ ವಿಜಯ, ಪ್ರಜಾಪ್ರಭುತ್ವದ ವಿಜಯ ಮತ್ತು ಜನಧ್ವನಿಯ ಶಕ್ತಿಗೆ ದೊರೆತ ಮಾನ್ಯತೆಯಾಗಿದೆ. ಈ ಹೋರಾಟದ ಅವಧಿಯಲ್ಲಿ ಅನೇಕ ವಿದ್ಯಾರ್ಥಿಗಳು ಮಾನಸಿಕ ಒತ್ತಡ ಅನುಭವಿಸಿದರು. ಕೆಲವು ಅಮೂಲ್ಯ ಜೀವಗಳನ್ನೂ ಕಳೆದುಕೊಂಡಿದ್ದೇವೆ. ಅವರಿಗೆ ನನ್ನ ಗೌರವಪೂರ್ವಕ ಶ್ರದ್ಧಾಂಜಲಿ. ಗಾಯಗೊಂಡ ಹಾಗೂ ಸಂಕಷ್ಟ ಅನುಭವಿಸಿದ ಎಲ್ಲ ವಿದ್ಯಾರ್ಥಿಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ.
ನಾನು 2000ನೇ ಇಸವಿಯಿಂದ ವಿವಿಧ ಜನಪರ ಹೋರಾಟಗಳಲ್ಲಿ ಭಾಗಿಯಾಗಿದ್ದೇನೆ. ಕಾಂಗ್ರೆಸ್ ಹಾಗೂ ಬಿಜೆಪಿ – ಎರಡೂ ಸರ್ಕಾರಗಳ ವಿರುದ್ಧ ಜನರ ಸಮಸ್ಯೆಗಳ ಕುರಿತು ಹೋರಾಟ ನಡೆಸಿದ್ದೇನೆ. ನನ್ನ ಅನುಭವದಲ್ಲಿ, ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದರು. ಹೋರಾಟಗಾರರನ್ನು ಗೌರವಿಸುತ್ತಿದ್ದರು. “ದೇಶದ್ರೋಹಿಗಳು” ಎಂದು ಬಿಂಬಿಸುವ ಪ್ರವೃತ್ತಿ ಇರಲಿಲ್ಲ. ಹೋರಾಟಗಾರರನ್ನು ಸಮಾಜದ ಸಮಸ್ಯೆಗಳನ್ನು ಪ್ರತಿನಿಧಿಸುವ ನಾಗರಿಕರೆಂದು ಪರಿಗಣಿಸಲಾಗುತ್ತಿತ್ತು. ಆದರೆ ಕಳೆದ ಹನ್ನೆರಡು ವರ್ಷಗಳಲ್ಲಿ ದೇಶ ಹಲವು ಐತಿಹಾಸಿಕ ಹೋರಾಟಗಳಿಗೆ ಸಾಕ್ಷಿಯಾಯಿತು. ಅವುಗಳಲ್ಲಿ ಪ್ರಮುಖವಾದವು ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು NRC ವಿರುದ್ಧದ ದೇಶವ್ಯಾಪಿ ಪ್ರತಿಭಟನೆಗಳು, ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ರೈತರ ಹೋರಾಟ, ನೋಟು ಅಮಾನ್ಯೀಕರಣದಿಂದ ಉಂಟಾದ ಸಮಸ್ಯೆಗಳ ವಿರುದ್ಧದ ಆಂದೋಲನಗಳು, ನಿರುದ್ಯೋಗದ ವಿರುದ್ಧ ಯುವಜನರ ಪ್ರತಿಭಟನೆಗಳು, ಸಾರ್ವಜನಿಕ ಬ್ಯಾಂಕುಗಳ ವಿಲೀನದ ವಿರುದ್ಧದ ಹೋರಾಟಗಳು, ಕಾರ್ಮಿಕ ಸಂಘಟನೆಗಳ ರಾಷ್ಟ್ರವ್ಯಾಪಿ ಪ್ರತಿಭಟನೆಗಳು, ಕೋವಿಡ್ ಅವಧಿಯ ವಿವಿಧ ಪ್ರಶ್ನೆಗಳ ಕುರಿತು ನಡೆದ ಪ್ರತಿಭಟನೆಗಳು ಹಾಗೂ ಮಣಿಪುರ ಸೇರಿದಂತೆ ಅನೇಕ ರಾಷ್ಟ್ರೀಯ ವಿಷಯಗಳಲ್ಲಿ ದೇಶಾದ್ಯಂತ ಜನರು ಧ್ವನಿ ಎತ್ತಿದ ಹೋರಾಟಗಳು.
ಆದರೆ ಇಂತಹ ಅನೇಕ ಹೋರಾಟಗಳಿಗೂ ಕೇಂದ್ರ ಸರ್ಕಾರ ಯಾವುದೇ ರೀತಿಯಲ್ಲಿ ಸ್ಪಂದಿಸಲಿಲ್ಲ. ಹೋರಾಟಗಾರರನ್ನು ದೇಶದ್ರೋಹಿಗಳು ಅಥವಾ ವಿದೇಶಿ ಶಕ್ತಿಗಳ ಪ್ರಭಾವಕ್ಕೆ ಒಳಗಾದವರು ಎಂಬ ಆರೋಪಗಳನ್ನು ಮಾಡಿದರು..ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಇತ್ತೀಚಿನ ಹೋರಾಟ ವಿಶೇಷ ಮಹತ್ವ ಪಡೆದುಕೊಂಡಿದೆ. ಲಾಠಿಚಾರ್ಜ್, ಬೆದರಿಕೆ, ಅಪಪ್ರಚಾರ – ಇವೆಲ್ಲದರ ನಡುವೆಯೂ ವಿದ್ಯಾರ್ಥಿಗಳು ಹಿಂದೆ ಸರಿಯಲಿಲ್ಲ. ತಮ್ಮ ಭವಿಷ್ಯದ ಪ್ರಶ್ನೆಯಲ್ಲಿ ಸಂಘಟಿತರಾಗಿ ಹೋರಾಡಿದರು. ಕೊನೆಗೆ ಅವರ ಧ್ವನಿಯನ್ನು ಸರ್ಕಾರ ಆಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಈ ವಿಜಯ ಕೇವಲ ಇಂದಿನ ಸರ್ಕಾರಕ್ಕಷ್ಟೇ ಅಲ್ಲ, ಮುಂದಿನ ಎಲ್ಲ ಸರ್ಕಾರಗಳಿಗೂ ಒಂದು ಸ್ಪಷ್ಟ ಸಂದೇಶ ನೀಡಿದೆ. ಜನರ ಧ್ವನಿಯನ್ನು ಎಷ್ಟೇ ಕಾಲ ನಿರ್ಲಕ್ಷಿಸಿದರೂ, ಪ್ರಜಾಪ್ರಭುತ್ವದಲ್ಲಿ ಅಂತಿಮ ತೀರ್ಪು ಜನರದ್ದೇ ಆಗಿರುತ್ತದೆ.
ಯುವಜನರಿಗೆ ತಮ್ಮ ಭವಿಷ್ಯ ಅಪಾಯದಲ್ಲಿದೆ ಎಂಬ ಅರಿವು ಬಂದಾಗ ಅವರು ಮೌನವಾಗಿರುವುದಿಲ್ಲ, ಅವರು ಸಂಘಟಿತರಾಗುತ್ತಾರೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಲು ಹೋರಾಟದ ಹಾದಿ ಹಿಡಿಯುತ್ತಾರೆ. ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಚುನಾವಣೆಗಳಲ್ಲಿ ಮಾತ್ರವಲ್ಲ; ಜಾಗೃತ ನಾಗರಿಕರು ತಮ್ಮ ಹಕ್ಕುಗಳಿಗಾಗಿ ಸಂಘಟಿತವಾಗಿ ಧ್ವನಿ ಎತ್ತುವ ಸಾಮರ್ಥ್ಯದಲ್ಲಿದೆ. ಜನರ ಧ್ವನಿಯನ್ನು ಗೌರವಿಸುವ ಸರ್ಕಾರವೇ ಪ್ರಜಾಪ್ರಭುತ್ವದ ಮೌಲ್ಯವನ್ನು ಉಳಿಸಬಲ್ಲದು. ಈ ಐತಿಹಾಸಿಕ ವಿಜಯವನ್ನು ಸಾಧಿಸಿದ ದೇಶದ ವಿದ್ಯಾರ್ಥಿ ಸಮುದಾಯಕ್ಕೆ ಮತ್ತೊಮ್ಮೆ ನನ್ನ ಅಭಿನಂದನೆಗಳು.

.jpeg)