ಕ್ರೈಂ

ರಾಯಚೂರಲ್ಲಿ ಬೀದಿ ನಾಯಿಗಳ ರೌದ್ರಾವತಾರ: ಬೆಳಗಿನ ಜಾವ ತೊಟ್ಟಿಲಿನಿಂದ ಇಳಿದು ಹೊರಬಂದ ಒಂದೂವರೆ ವರ್ಷದ ಕಂದಮ್ಮ ಸಾವು!



ರಾಯಚೂರು: ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಮತ್ತೊಂದು ಬಲಿ ಪಡೆದಿದ್ದು, ಆರೇಳು ನಾಯಿಗಳ ಹಿಂಡು ದಾಳಿ ನಡೆಸಿದ ಪರಿಣಾಮ ಒಂದೂವರೆ ವರ್ಷದ ಹೆಣ್ಣು ಮಗುವೊಂದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಸಿಂಧನೂರು ತಾಲೂಕಿನ ಕೆ.ಹಂಚಿನಾಳ ಕ್ಯಾಂಪ್​ನಲ್ಲಿ ಸಂಭವಿಸಿದೆ. 


ವಿಜಯನಗರ ಜಿಲ್ಲೆಯ ಹೊಸಪೇಟೆ ಮೂಲದ ರಜಾಕಸಾಬ್ ಎಂಬುವವರ ಪುತ್ರಿ ಆನಂ (1.5 ವರ್ಷ) ಮೃತಪಟ್ಟ ದುರ್ದೈವಿ ಕಂದಮ್ಮ ಎಂದು ಗುರುತಿಸಲಾಗಿದೆ. ಬುಧವಾರ ಮುಂಜಾನೆ ಮಗು ನಿದ್ದೆಯಿಂದ ಎದ್ದು ಮನೆಯ ಅಂಗಳಕ್ಕೆ ಬಂದಾಗ ನಾಯಿಗಳು ಹಿಂಡು ಹಿಂಡಾಗಿ ಮುಗಿಬಿದ್ದು ಈ ಘೋರ ಕೃತ್ಯ ಎಸಗಿವೆ.


ಮೃತ ಮಗುವಿನ ಪೋಷಕರು ಪೊಲೀಸರಿಗೆ ನೀಡಿರುವ ದೂರಿನ ಅನ್ವಯ, ಜುಲೈ 15ರ ಬೆಳಗಿನ ಜಾವ 3 ಗಂಟೆಯಿಂದ 6 ಗಂಟೆಯ ಸುಮಾರಿಗೆ ಈ ಭೀಕರ ಘಟನೆ ನಡೆದಿದೆ. ಮಗು ನಿದ್ದೆಯಲ್ಲಿದ್ದಾಗ ತೊಟ್ಟಿಲಿನಿಂದ ಕೆಳಗಿಳಿದು ಮನೆಯಿಂದ ಹೊರಗೆ ಹೆಜ್ಜೆ ಇಟ್ಟಿದೆ. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಬೀದಿನಾಯಿಗಳ ಹಿಂಡು ಮಗುವನ್ನು ಎಳೆದೊಯ್ದು ಮುಖ, ಕೈ, ಕಾಲು ಹಾಗೂ ಹೊಟ್ಟೆಯ ಭಾಗ ಸೇರಿದಂತೆ ದೇಹದಾದ್ಯಂತ ಮನಬಂದಂತೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿವೆ. ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದ ಮಗು ತೀವ್ರ ವೇದನೆಯಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದೆ.

ಘಟನೆಗೆ ಸಂಬಂಧಿಸಿದಂತೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



ಕಣ್ಣೆದುರೇ ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಗೋಳು ನೋಡಲಾಗದಂತಿತ್ತು. ಈ ಭೀಕರ ಘಟನೆಯಿಂದ ಇಡೀ ಹಳ್ಳಿ ಬೆಚ್ಚಿಬಿದ್ದಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ರಾಯಚೂರು ಜಿಲ್ಲೆಯಾದ್ಯಂತ ಬೀದಿ ನಾಯಿಗಳ ದಾಳಿಯಿಂದ ಸಾರ್ವಜನಿಕರು ಹಾಗೂ ಸಣ್ಣ ಮಕ್ಕಳು ಗಾಯಗೊಳ್ಳುತ್ತಿರುವ ಮತ್ತು ಸಾವನ್ನಪ್ಪುತ್ತಿರುವ ಪ್ರಕರಣಗಳು ಸರಣಿ ರೂಪದಲ್ಲಿ ವರದಿಯಾಗುತ್ತಿದ್ದರೂ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡಿಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ನಗರಾಡಳಿತ ಹಾಗೂ ಅಧಿಕಾರಿಗಳು ಜಂಟಿಯಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ನಾಯಿಗಳ ನಿಯಂತ್ರಣಕ್ಕೆ ಮುಂದಾಗಬೇಕೆಂದು ಸ್ಥಳೀಯರು ಕಟ್ಟುನಿಟ್ಟಾಗಿ ಒತ್ತಾಯಿಸಿದ್ದಾರೆ.