ಪ್ರಾದೇಶಿಕ

ಬಂಟ್ವಾಳ‌ ಯುವತಿಯ ಕೊಲೆಗಾರನ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು - ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) (DSS), ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣ, ಜಿಲ್ಲಾ ಸಮಿತಿಯು ಒತ್ತಾಯ


ನಿನ್ನೆ ಗುರುವಾರ ಬಂಟ್ವಾಳ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ  ಕಕ್ಯಪದವು ಸಮೀಪದ ಉಳಿ ಗ್ರಾಮದ ಕೊಡಂಗೆ ನಿವಾಸಿ ಲಾವಣ್ಯ ಎಂಬ ಯುವತಿಯನ್ನು ಬೆಳ್ತಂಗಡಿ ತಾಲೂಕಿನ ಓಡಿಲ್ನಾಳದ ಚೇತನ್ ಎಂಬ ಯುವಕನು ತಲವಾರಿನಿಂದ ಕಡಿದು ಬರ್ಬರವಾಗಿ ಹತ್ಯೆಗೈದಿದ್ದು ಘಟನೆಯಿಂದ ಇಡೀ ದಕ್ಷಿಣಕನ್ನಡ ಜಿಲ್ಲೆಯೇ ಬೆಚ್ಚಿಬಿದ್ದಿದೆ. ಈ ಅಮಾನವೀಯ ಘಟನೆಯು ಜಿಲ್ಲೆಯ ನಾಗರಿಕರನ್ನು ತಲೆತಗ್ಗಿಸುವಂತೆ ಮಾಡಿದೆ. ಜನರ ಬದುಕುವ ಹಕ್ಕನ್ನೇ ಕಸಿಯುವಂತಹ ಇಂತಹ ನರಹಂತಕರಿಂದ ವಿದ್ಯಾವಂತರ ಜಿಲ್ಲೆ, ಬುದ್ದಿವಂತರ ಜಿಲ್ಲೆ ಎನಿಸಿಕೊಂಡಿರುವ ಜಿಲ್ಲೆಯ ಮಾನ ಹರಾಜು ಆಗಿದೆ. ಕಳೆದೆರಡು ವರ್ಷಗಳಿಂದ ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಕ್ರಮಗಳಿಂದ ಜಿಲ್ಲೆಯಲ್ಲಿ ಇಂತಹ ಅಮಾನವೀಯ ಘಟನೆಗಳು ಕಡಿಮೆಯಾಗಿದ್ದು ಮತ್ತೆ ಬಾಲಬಿಚ್ಚುವಂತೆ ಕಾಣುತ್ತಿದೆ.


ಇದೀಗ ಪೊಲೀಸ್ ಇಲಾಖೆಯು ಕೊಲೆಗಾರನನ್ನು ಬಂಧಿಸಿದ್ದು ಸ್ವಾಗತಾರ್ಹ. ಇಲಾಖೆಯು ಕೂಡಲೇ ಕೊಲೆಗಾರನ ಮೇಲೆ  ಕಟ್ಟುನಿಟ್ಟಿನ  ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ), ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣ, ಜಿಲ್ಲಾ ಸಮಿತಿಯು ಒತ್ತಾಯಿಸಿದೆ.