ಮಂಗಳೂರು: ಹೊರ್ಮುಜ್ ಜಲಸಂಧಿಯಲ್ಲಿ ಮತ್ತೆ ಸಂಘರ್ಷ ಭುಗಿಲೆದ್ದಿದೆ. 11ಮಂದಿ ಭಾರತೀಯರಿದ್ದ ಕಾರ್ಗೋ ಹಡಗಿನ ಮೇಲೆ ಇರಾನ್ ಸೈನಿಕರು ದಾಳಿಯಲ್ಲಿ ಹಡಗಿನಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮೂಲದ ಯುವಕ ಭಾರೀ ಅಪಾಯದಿಂದ ಪಾರಾಗಿದ್ದಾರೆ. ಈ ವೇಳೆ ಪುಣೆ ಮೂಲದ ಯುವಕ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಸೈಪ್ರಸ್ ಧ್ವಜವಿದ್ದ ಎಂ.ವಿ. ಜಿಎಫ್‌ಎಸ್ ಗ್ಯಾಲಕ್ಸಿ ಎಂಬ ಹೆಸರಿನ ಹಡಗಿನ ಮೇಲೆ ಶನಿವಾರ ಮಧ್ಯರಾತ್ರಿ ಇರಾನ್ ಐಆರ್ ಜಿಸಿ ಪಡೆಗಳು ಬಾಂಬ್ ದಾಳಿ ನಡೆಸಿದೆ. ಈ ವೇಳೆ, ಹಡಗಿನ ಇಂಜಿನ್ ಭಾಗ ಹೊತ್ತಿ ಉರಿದಿದ್ದು, ಹಡಗಿನಲ್ಲಿ 20ಕ್ಕೂ ಅಧಿಕ ಸಿಬ್ಬಂದಿಯಿದ್ದರು. ತಕ್ಷಣ ರಕ್ಷಣೆ ನೀಡಲು ಸ್ಥಳೀಯ ಸೇನಾ ಪಡೆಗಳಿಗೆ ಕೋರಿಕೆ ಸಲ್ಲಿಸಲಾಗಿತ್ತು. ಬೆಳಗ್ಗೆ 5.30ರ ವೇಳೆಗೆ ಒಮಾನ್ ಸೇನೆಯು ರಕ್ಷಣೆಗೆ ಧಾವಿಸಿತ್ತು. ಅಷ್ಟರಲ್ಲಿ ಲೈಫ್ ಬೋಟ್ ಮೂಲಕ ಅಪಾಯದಿಂದ ಪಾರಾಗಿದ್ದ ಸಿಬ್ಬಂದಿ ಸಮುದ್ರಕ್ಕೆ ಹಾರಿದ್ದರು. ಘಟನೆಯಲ್ಲಿ ಕೆಲವರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ.
ದಾಳಿಗೊಳಗಾದ ಈ ಹಡಗಿನಲ್ಲಿ ಉಪ್ಪಿನಂಗಡಿ ಬಿಳಿಯೂರು ನಿವಾಸಿ ರಚನ್ ಕೆ.ಆರ್.(25) ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಈ ಬಾರಿ ಮೂರನೇ ಹಡಗಿನಲ್ಲಿ ಕಾರ್ಗೋ ಇನ್ ಚಾರ್ಜ್ ಆಗಿ ಕೆಲಸ ಮಾಡಿಕೊಂಡಿದ್ದರು. ಹೊರ್ಮುಜ್ ಜಲಸಂಧಿಯಲ್ಲಿ ಬರುವ ವೇಳೆಗೆ ದಾಳಿಯಾಗುವ ಸಾಧ್ಯತೆ ಇದೆಯೆಂದು ತನ್ನ ಕುಟುಂಬಸ್ಥರಿಗೂ ತಿಳಿಸಿದ್ದರು. ಆ ಭಾಗದಲ್ಲಿ ಅಮೆರಿಕ- ಇರಾನ್ ಸಂಘರ್ಷ ಮತ್ತೆ ಎದುರಾಗಿದ್ದರಿಂದ ದಾಳಿ ಸಾಧ್ಯತೆ ಬಗ್ಗೆ ಸುಳಿವುಗಳಿದ್ದವು.
ನಡುರಾತ್ರಿ ವೇಳೆಗೆ ಇರಾನ್ ಕರಾವಳಿಯಿಂದ ತೆರಳುತ್ತಿದ್ದಾಗಲೇ ಇರಾನ್ ಸೇನಾ ಪಡೆಗಳು ಕ್ಷಿಪಣಿ ದಾಳಿ ಮಾಡಿದ್ದು, ಈ ವೇಳೆ ಒಬ್ಬ ಸಿಬ್ಬಂದಿ ಹೊರತುಪಡಿಸಿ ಉಳಿದೆಲ್ಲರೂ ಬಚಾವ್ ಆಗಿದ್ದಾರೆ. ಸದ್ಯಕ್ಕೆ ಇವರನ್ನು ಒಮಾನ್ ಸೇನಾ ಪಡೆ ಕರೆದೊಯ್ದಿದ್ದು, ಸುರಕ್ಷಿತ ಜಾಗದಲ್ಲಿ ಇರಿಸಿದೆ. ಪುಣೆ ಮೂಲದ ಇಂಜಿನಿಯರ್ ಯುವಕನೊಬ್ಬ ಇಂಜಿನ್ ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದ್ದಾಗ ಅಪಾಯಕ್ಕೀಡಾಗಿ ನಾಪತ್ತೆಯಾಗಿದ್ದಾರೆ. ಕಾರ್ಗೋ ಹಡಗನ್ನು ಸದ್ಯ ಒಮಾನ್ ಕರಾವಳಿಯಲ್ಲಿ ಲಂಗರು ಹಾಕಿಸಲಾಗಿದೆ. ಸೈಪ್ರಸ್ ಮೂಲದ ಬೃಹತ್ ಹಡಗು ಸ್ಟೀಲ್ ಇನ್ನಿತರ ಸರಕುಗಳನ್ನು ಹೊತ್ತುಕೊಂಡು ಸಿಂಗಾಪುರದತ್ತ ತೆರಳುತ್ತಿತ್ತು.
ಪದವಿ ಮುಗಿಸಿ ಮುಂಬೈನಲ್ಲಿ ಮೆರೈನ್ ಇಂಜಿನಿಯರಿಂಗ್ ಕೋರ್ಸ್ ಮುಗಿಸಿದ್ದ ರಚನ್ ಆ ಬಳಿಕ ಹಡಗಿನಲ್ಲಿ ಕೆಲಸಕ್ಕೆ ಸೇರಿದ್ದು 9ತಿಂಗಳಿಗೊಮ್ಮೆ ಊರಿಗೆ ಬರುವುದನ್ನು ರೂಢಿ ಮಾಡಿಕೊಂಡಿದ್ದರು. ಈ ಬಾರಿ ಸಿಂಗಾಪುರ ಟ್ರಿಪ್ ಮುಗಿಸಿ ಇನ್ನೊಂದು ತಿಂಗಳಲ್ಲಿ ಊರಿಗೆ ಬರುವುದಕ್ಕೆ ರೆಡಿ ಮಾಡಿಕೊಂಡಿದ್ದರು. ಸದ್ಯಕ್ಕೆ ಒಮಾನ್ ದೇಶದಲ್ಲಿ ಸುರಕ್ಷಿತ ಆಗಿರುವುದಾಗಿ ಯುವಕ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
