ಮಂಗಳೂರು: ಬಂಟ್ವಾಳ ತಾಲೂಕಿನಲ್ಲಿ ಚಿನ್ನಾಭರಣ ದೋಚುವ ದುರಾಸೆಯಿಂದ ವೃದ್ಧೆಗೆ ಆಹಾರದಲ್ಲಿ ವಿಷವುಣಿಸಿ, ಬಳಿಕ ಉಸಿರುಗಟ್ಟಿಸಿ ಕೊಲೆಗೈದ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯವು ಜೀವಾವಧಿ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಶಿಕ್ಷೆಗೆ ಒಳಗಾದ ಅಪರಾಧಿಗಳು:
1. ವಿಲ್ಮಾ ಪ್ರಸ್ಚಿತಾ ಬಾರೆಟ್ಟೊ (30) – ನಿವಾಸಿ: ಅಮ್ಟಾಡಿ ಹೀರಾ
2. ಸತೀಶ್ (33) – ನಿವಾಸಿ: ನರಿಕೊಂಬು ಅಂತರಹೌಸ್
3. ಚರಣ್ ಕುಮಾರ್ (34) – ನಿವಾಸಿ: ನರಿಕೊಂಬು ಪದಕಟ್ಟೆ ಹೊಯಿಗೆಬೈಲು
ಪ್ರಕರಣದ ಹಿನ್ನೆಲೆ ಹಾಗೂ ಭೀಕರ ಕೃತ್ಯ:
ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಪಾಂಡೀಲಿ ಎಂಬಲ್ಲಿ 80 ವರ್ಷದ ವೃದ್ಧೆ ಬೆನೆಡಿಕ್ಟ್ ಕಾರ್ಲೊ ಅವರು ಪಾರ್ಶ್ವವಾಯು (Paralysis) ಪೀಡಿತರಾಗಿ ಹಾಸಿಗೆ ಹಿಡಿದಿದ್ದ ಪತಿ ಇನಾಸ್ ಕಾರ್ಲೋ ಅವರೊಂದಿಗೆ ವಾಸಿಸುತ್ತಿದ್ದರು. ಈ ದಂಪತಿಯ ಆರೈಕೆಗಾಗಿ ಅಪರಾಧಿ ವಿಲ್ಮಾ ಪ್ರಸ್ಚಿತಾ ಕಳೆದ ಎರಡು ತಿಂಗಳಿಂದ ಹೋಮ್ ನರ್ಸ್/ಕೆಲಸದಾಕೆಯಾಗಿ ಹೋಗುತ್ತಿದ್ದಳು.
ವೃದ್ಧೆ ಬೆನೆಡಿಕ್ಟ್ ಅವರ ಬಳಿಯಿದ್ದ ಬಂಗಾರದ ಆಭರಣಗಳನ್ನು ಕಂಡ ವಿಲ್ಮಾಳಲ್ಲಿ ದುರಾಶೆ ಹುಟ್ಟಿ, ಅದನ್ನು ಕದಿಯಲು ಸಂಚು ರೂಪಿಸಿದ್ದಳು. ತನ್ನ ಪರಿಚಿತ ಸತೀಶನಿಗೆ ವಿಷಯ ತಿಳಿಸಿದಾಗ, ಆತ ಆಹಾರದಲ್ಲಿ ವಿಷ ಕೊಡುವಂತೆ ಸಲಹೆ ನೀಡಿದ್ದನು.
·
ವಿಷವುಣಿಸಿ ಉಸಿರುಗಟ್ಟಿಸಿ ಹತ್ಯೆ: 2021ರ ಜನವರಿ 25ರಂದು ರಾತ್ರಿ ವಿಲ್ಮಾ ವೃದ್ಧೆಗೆ ಆಹಾರದೊಂದಿಗೆ ವಿಷ ನೀಡಿದ್ದಳು. ಇದರಿಂದ ಬೆನೆಡಿಕ್ಟಾ ಅವರು ಅರೆಜೀವ ಸ್ಥಿತಿಗೆ ತಲುಪಿದ್ದರು. ಆ ಬಳಿಕ ವಿಲ್ಮಾ ಮತ್ತೆ ಸತೀಶನಿಗೆ ಕರೆ ಮಾಡಿ ವಿಷಯ ತಿಳಿಸಿದಾಗ, ಸತೀಶ್ ಆ ಮನೆಗೆ ಮತ್ತೊಬ್ಬ ಅಪರಾಧಿ ಚರಣ್ ಕುಮಾರ್ನನ್ನು ಕಳುಹಿಸಿಕೊಟ್ಟಿದ್ದನು. ಮನೆಗೆ ಬಂದ ಚರಣ್ ಕುಮಾರ್, ವಿಲ್ಮಾ ಜತೆ ಸೇರಿಕೊಂಡು ಅರೆಜೀವವಾಗಿದ್ದ ವೃದ್ಧೆಯನ್ನು ತಲೆದಿಂಬು ಹಾಗೂ 'ಬೈರಾಸ್' ನಿಂದ ಉಸಿರುಗಟ್ಟಿಸಿ ಕ್ರೂರವಾಗಿ ಹತ್ಯೆ ಮಾಡಿದ್ದರು.
·
₹2.75 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ: ವೃದ್ಧೆಯ ಕೊಲೆಯ ನಂತರ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ, ಕಿವಿಯೊಲೆ, ಕೈಬಳೆ, ಉಂಗುರಗಳು ಹಾಗೂ ಚೈನ್ ಸೇರಿದಂತೆ ಒಟ್ಟು 61.070 ಗ್ರಾಂ ತೂಕದ (ಸುಮಾರು ₹2,75,000 ಮೌಲ್ಯದ) ಬಂಗಾರದ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು.
ಪೊಲೀಸ್ ತನಿಖೆ ಹಾಗೂ ನ್ಯಾಯಾಲಯದ ತೀರ್ಪು:
2021ರ ಜನವರಿ 26ರಂದು ಘಟನೆ ಬೆಳಕಿಗೆ ಬಂದಿದ್ದು, ಆರಂಭದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ಟಿ.ಡಿ. ನಾಗರಾಜ್ ಅವರು ಪಕ್ಕಾ ತನಿಖೆ ನಡೆಸಿ, ಇದೊಂದು ವ್ಯವಸ್ಥಿತ ಕೊಲೆ ಎಂದು ಪತ್ತೆಹಚ್ಚಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (Charge Sheet) ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು ಒಟ್ಟು 44 ಸಾಕ್ಷಿಗಳಲ್ಲಿ 32 ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸಿ, ಮೂವರೂ ಆರೋಪಿಗಳು ಎಸಗಿದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಅಲ್ಲದೆ, ಅಪರಾಧಿಗಳು ಪಾವತಿಸಬೇಕಾದ ಒಟ್ಟು ₹33,000 ದಂಡದ ಪೈಕಿ ₹8,000 ಗಳನ್ನು ಸರ್ಕಾರಕ್ಕೆ ಹಾಗೂ ₹25,000 ಗಳನ್ನು ಮೃತ ವೃದ್ಧೆಯ ಮಗ ರೊನಾಲ್ಡ್ ಕಾರ್ಲೋ ಅವರಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ್ ಅವರು ಸರ್ಕಾರದ ಪರವಾಗಿ ಸಮರ್ಥವಾಗಿ ವಾದ ಮಂಡಿಸಿದ್ದರು.
