ಮಹಿಳೆಯರ ಸುರಕ್ಷತೆಗೆ ಪೊಲೀಸ್ ಇಲಾಖೆಯಿಂದ ಜಾಗೃತಿ ಅಭಿಯಾನ ಅಗತ್ಯ
🖋️ಕಮಲಾಕ್ಷ ಬಜಾಲ್
ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ನಡೆದ ಯುವತಿಯ ಭೀಕರ ಹತ್ಯೆ ಘಟನೆ ಅತ್ಯಂತ ಖಂಡನೀಯ. ಇಂತಹ ಅಮಾನವೀಯ ಕೃತ್ಯಗಳು ನಾಗರಿಕ ಸಮಾಜಕ್ಕೆ ಕಪ್ಪು ಚುಕ್ಕೆ. ಮೃತ ಯುವತಿಯ ಕುಟುಂಬಕ್ಕೆ ನಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಸಾರ್ವಜನಿಕ ಸ್ಥಳಗಳಲ್ಲಿಯೇ ಮಹಿಳೆಯರು ಸುರಕ್ಷಿತವಾಗಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಅತ್ಯಂತ ಆತಂಕಕಾರಿ. ಇಂತಹ ಘಟನೆಗಳು ಮರುಕಳಿಸದಂತೆ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಶೀಘ್ರ ನ್ಯಾಯ ದೊರಕುವಂತೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕ್ರಮವಹಿಸಬೇಕು.
ಅದರೊಂದಿಗೆ ಪೊಲೀಸ್ ಇಲಾಖೆ ರಾಜ್ಯಾದ್ಯಂತ ಬಸ್ ನಿಲ್ದಾಣಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ಸುರಕ್ಷತೆ, ಕಾನೂನು ಅರಿವು, ಕಿರುಕುಳ ಮತ್ತು ಹಿಂಸಾಚಾರದ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಾರ್ವಜನಿಕರು ಅನುಮಾನಾಸ್ಪದ ಚಟುವಟಿಕೆಗಳನ್ನು ತಕ್ಷಣ ಪೊಲೀಸರಿಗೆ ತಿಳಿಸುವಂತೆ ಅರಿವು ಮೂಡಿಸಬೇಕು. ಅಗತ್ಯವಿರುವ ಕಡೆಗಳಲ್ಲಿ ಸಿಸಿಟಿವಿ ವ್ಯವಸ್ಥೆ, ಪೊಲೀಸ್ ಗಸ್ತು ಹಾಗೂ ತುರ್ತು ಸಹಾಯವಾಣಿ ಕುರಿತು ವ್ಯಾಪಕ ಪ್ರಚಾರ ನಡೆಸಬೇಕು. ಮಹಿಳೆಯರ ಜೀವ ಮತ್ತು ಗೌರವದ ರಕ್ಷಣೆ ಸಮಾಜದ ಹಾಗೂ ಸರ್ಕಾರದ ಜಂಟಿ ಹೊಣೆಗಾರಿಕೆಯಾಗಿದೆ. ಇಂತಹ ದುರ್ಘಟನೆಗಳು ಮತ್ತೆ ಮರುಕಳಿಸದಂತೆ ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು.
