ಕ್ರೈಂ

ಜೈಪುರ: ಅನುಕಂಪದ ನೌಕರಿ ಹಾಗೂ ಆಸ್ತಿಗಾಗಿ ಹೆತ್ತ ತಾಯಿಯನ್ನೇ ಸುಪಾರಿ ಕೊಟ್ಟು ಕೊಲ್ಲಿಸಿದ ಹೆಣ್ಣುಮಗಳು! Murder




ಅಮ್ಮ ಸತ್ತರೆ ಸರ್ಕಾರಿ ಕೆಲಸ ಸಿಗುತ್ತದೆ ಎಂಬ ದುರಾಸೆಗೆ ಬಿದ್ದ ಮಗಳು
₹7 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡು ಅಪಘಾತದಂತೆ ಬಿಂಬಿಸಿ ತಾಯಿಯ ಹತ್ಯೆ


ಜೈಪುರ: ಆಸ್ತಿ ಪಾಸ್ತಿ ಹಾಗೂ ತಾಯಿಗೆ ಸಿಕ್ಕಿದ್ದ ಸರ್ಕಾರಿ ಉದ್ಯೋಗವನ್ನು ತಾನು ಗಿಟ್ಟಿಸಿಕೊಳ್ಳಬೇಕು ಎಂಬ ದುರಾಸೆಗೆ ಬಿದ್ದ ಮಗಳೊಬ್ಬಳು, ಬಾಡಿಗೆ ಕೊಲೆಗಾರರ ನೆರವು ಪಡೆದು ಹೆತ್ತ ತಾಯಿಯನ್ನೇ ಭೀಕರವಾಗಿ ಹತ್ಯೆ ಮಾಡಿಸಿರುವ ಅಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ಬೆಳಕಿಗೆ ಬಂದಿದೆ. 


ಕರುಳು ಹಂಚಿ ಹುಟ್ಟಿದ ಮಗಳ ಈ ಕ್ರೌರ್ಯ ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದ್ದು, ಈ ಕೃತ್ಯದಲ್ಲಿ ಕುಟುಂಬದ ಇತರ ಸಂಬಂಧಿಕರೂ ಕೈಜೋಡಿಸಿರುವುದು ಜೈಪುರದಲ್ಲಿ ತಲ್ಲಣ ಸೃಷ್ಟಿಸಿದೆ.

ನೀರಜ್ ಶರ್ಮಾ ಕೊಲೆಯಾದ ತಾಯಿ. ಹತ್ಯೆಯ ಮಾಸ್ಟರ್ ಮೈಂಡ್ ಆಗಿರುವ ಮಗಳು ಆಯುಷಿ ಸೇರಿದಂತೆ ಒಟ್ಟು ಏಳು ಮಂದಿ ಆರೋಪಿಗಳನ್ನು ಪೊಲೀಸರು ತಕ್ಷಣವೇ ದಸ್ತಗಿರಿ ಮಾಡಿ ಜೈಲಿಗಟ್ಟಿದ್ದಾರೆ. ಕ್ರೂರ ಮಗಳು ತಾಯಿಯನ್ನು ಕೊಲ್ಲುವ ಮುನ್ನ ಆಕೆಯ ಮೇಲೆ ಮಾಟಮಂತ್ರದ ಪ್ರಯೋಗಗಳನ್ನೂ ಮಾಡಿಸಿದ್ದಳು ಎಂಬ ಶಾಕಿಂಗ್ ಮಾಹಿತಿ ವಿಚಾರಣೆಯಿಂದ ಬಯಲಾಗಿದೆ.

ಅಪಘಾತವೆಂದು ಬಿಂಬಿಸಿ ಕಾರು ಗುದ್ದಿಸಿ ಕೊಲೆ:

ಪೊಲೀಸ್ ವಿಚಾರಣೆಯ ವೇಳೆ ಹಂತಕರು ಕೃತ್ಯದ ಭೀಕರ ಪ್ಲಾನ್ ಬಿಚ್ಚಿಟ್ಟಿದ್ದಾರೆ. ನೀರಜ್ ಶರ್ಮಾ ಅವರ ಹತ್ಯೆಗೆ ಕಳೆದ ಹಲವು ದಿನಗಳಿಂದ ಸಂಚು ರೂಪಿಸಲಾಗುತ್ತಿತ್ತು. ಒಂದು ತಿಂಗಳ ಹಿಂದೆಯಷ್ಟೇ ಆರೋಪಿಗಳು ಭರತ್‌ಪುರದಿಂದ ಥಾರ್ (Thar SUV) ವಾಹನದಲ್ಲಿ ನೀರಜ್ ಅವರನ್ನು ಜೈಪುರಕ್ಕೆ ಕರೆತಂದಿದ್ದರು. ಅಲ್ಲಿ ರಸ್ತೆ ಅಪಘಾತದ ನಾಟಕವಾಡಿ ಕಾರು ಗುದ್ದಿಸಿ ಕೊಲ್ಲಲು ನಡೆಸಿದ ಮೊದಲ ಪ್ರಯತ್ನ ವಿಫಲವಾಗಿತ್ತು. ಆದರೂ ಛಲಬಿಡದ ಆರೋಪಿಗಳು, ಜುಲೈ 4 ರಂದು ಮತ್ತೊಮ್ಮೆ ವ್ಯವಸ್ಥಿತ ಸ್ಕೆಚ್ ಹಾಕಿ ಕಾರನ್ನು ವೇಗವಾಗಿ ಡಿಕ್ಕಿ ಹೊಡೆಸಿ ನೀರಜ್ ಅವರನ್ನು ಕೊಂದಿದ್ದಾರೆ. ಬಳಿಕ ಇದನ್ನು ಕೇವಲ ಒಂದು ಆಕಸ್ಮಿಕ ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದರು.

ಮೊಬೈಲ್‌ನಲ್ಲಿ ಪತ್ತೆಯಾಯ್ತು ಮಾಟಮಂತ್ರದ ರಹಸ್ಯ:

ಮುಖ್ಯ ಆರೋಪಿ ಆಯುಷಿಯ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದು ಪೊಲೀಸರು ಸೈಬರ್ ತಪಾಸಣೆ ನಡೆಸಿದಾಗ ಗೂಢ ಸಂಗತಿಗಳು ಪತ್ತೆಯಾಗಿವೆ. ಅಪಘಾತ ನಡೆಯುವ ಹಿಂದಿನ ದಿನವಷ್ಟೇ ಆಯುಷಿ ತನ್ನ ತಾಯಿಯ ಬಟ್ಟೆಗಳನ್ನು ಮನೆಯ ಮೆಟ್ಟಿಲುಗಳ ಮೇಲೆ ಇಟ್ಟು ಸುಡುತ್ತಿದ್ದ ವಿಡಿಯೋ ಮೊಬೈಲ್‌ನಲ್ಲಿ ಸಿಕ್ಕಿದೆ. ಇದರೊಂದಿಗೆ ಹತ್ಯೆಗೆ ಬಳಸಿದ ವಾಹನ ಮತ್ತು ಮನೆಯೊಳಗೆ ತನಿಖೆ ನಡೆಸಿದಾಗ ಕುಂಕುಮ, ತಾಯಿತ ಸೇರಿದಂತೆ ಹಲವು ಅತೀಂದ್ರೀಯ ಹಾಗೂ ಮಾಟಮಂತ್ರಕ್ಕೆ ಬಳಸುವ ನಿಗೂಢ ವಸ್ತುಗಳು ಪತ್ತೆಯಾಗಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಕೌಟುಂಬಿಕ ಒಳಸಂಚು ಮತ್ತು ₹7 ಲಕ್ಷದ ಸುಪಾರಿ:

ಆರೋಪಿ ಆಯುಷಿ ನೀಡಿದ ಆಧಾರದ ಮೇಲೆ ತನಿಖೆ ಮುಂದುವರಿಸಿದಾಗ, ಆಕೆಯ ತಂದೆಯ ಕಡೆಯ ಸಂಬಂಧಿಕರು ಈ ಇಡೀ ಕೊಲೆಗೆ ಪೂರ್ಣ ಬೆಂಬಲ ನೀಡಿರುವುದು ಸಾಬೀತಾಗಿದೆ. ಸಂಬಂಧಿಕರೇ ಮಧ್ಯಸ್ಥಿಕೆ ವಹಿಸಿ ತಾಯಿಯನ್ನು ಮುಗಿಸಲು ಬಾಡಿಗೆ ಹಂತಕರನ್ನು (Supari Killers) ಗೊತ್ತುಪಡಿಸಿದ್ದರು. ಈ ಭೀಕರ ಹತ್ಯೆ ಕೃತ್ಯಕ್ಕಾಗಿ ಹಂತಕರಿಗೆ ಒಟ್ಟು ₹7 ಲಕ್ಷ ರೂಪಾಯಿ ಕೊಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ಆಯುಷಿ ಬಾಯಿಬಿಟ್ಟಿದ್ದಾಳೆ.

ತಂದೆಯ ನಿಧನ, ತಾಯಿಗೆ ಸಿಕ್ಕಿದ್ದ ಅನುಕಂಪದ ನೌಕರಿ:

ಕೊಲೆಯಾದ ನೀರಜ್ ಶರ್ಮಾ ಅವರ ಪತಿ ವಿಜಯ್ ಕುಮಾರ್ ಶರ್ಮಾ ಅವರು ನ್ಯಾಯಾಲಯದಲ್ಲಿ ಲೋವರ್ ಡಿವಿಷನ್ ಕ್ಲರ್ಕ್ (LDC) ಆಗಿ ಸೇವೆ ಸಲ್ಲಿಸುತ್ತಿದ್ದರು. ದುರದೃಷ್ಟವಶಾತ್ ಅವರು ಒಂದು ವರ್ಷದ ಹಿಂದೆ ಮೃತಪಟ್ಟಿದ್ದರು. ಪತಿಯ ನಿಧನದ ನಂತರ ನಿಯಮಾವಳಿಗಳ ಪ್ರಕಾರ ಪತ್ನಿ ನೀರಜ್ ಶರ್ಮಾ ಅವರಿಗೆ ಅನುಕಂಪದ ಆಧಾರದ ಮೇಲೆ ಆ ಸರ್ಕಾರಿ ಕೆಲಸ ಸಿಕ್ಕಿತ್ತು. ಆದರೆ, ತಾಯಿ ಕೂಡ ಮರಣ ಹೊಂದಿದರೆ ಆ ಸರ್ಕಾರಿ ನೌಕರಿ ಮತ್ತು ತಂದೆಯ ಆಸ್ತಿ ತನಗೆ ವರ್ಗಾವಣೆಯಾಗುತ್ತದೆ ಎಂಬ ಕ್ರೂರ ಆಲೋಚನೆ ಮಾಡಿದ ಆಯುಷಿ, ಹೆತ್ತ ಒಡಲನ್ನೇ ಸೀಳುವ ಜಟಲ ನಿರ್ಧಾರ ಕೈಗೊಂಡಿದ್ದಳು.

ಏಳು ಮಂದಿ ಜೈಲಿಗೆ, ಒಬ್ಬನಿಗಾಗಿ ಶೋಧ:

ಘಟನೆಗೆ ಸಂಬಂಧಿಸಿದಂತೆ ಕೊಲೆಗೆ ಸಂಚು ರೂಪಿಸಿದ ಪುತ್ರಿ ಆಯುಷಿ, ಆಕೆಗೆ ಸಾಥ್ ನೀಡಿದ ಒಬ್ಬ ಸಂಬಂಧಿ ಹಾಗೂ ಐದು ಮಂದಿ ಸುಪಾರಿ ಕಿಲ್ಲರ್‌ಗಳನ್ನು ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿ ಜೈಲಿಗಟ್ಟಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಸಂಬಂಧಿ ಸದ್ಯ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.