ಕ್ರೈಂ

ಬೆಂಗಳೂರಿನಲ್ಲಿ ಕೌಟುಂಬಿಕ ಕಲಹ, ವಿಕೃತ ಹತ್ಯಾಕಾಂಡ: ಒಂದೇ ಕುಟುಂಬದ ಮೂವರನ್ನು ಕಡಿದು ಕೊಂದು, ತಾನೂ ಆತ್ಮಹತ್ಯೆಗೆ ಶರಣಾದ ಚಾಲಕ ಪ್ರಶಾಂತ್!

 





ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಮುಂಜಾನೆ ಮತ್ತೊಂದು ಭೀಕರ ಕೌಟುಂಬಿಕ ಕಲಹದ ಪ್ರಕರಣದಲ್ಲಿ, ಚಾಲಕನಾಗಿದ್ದ ಪ್ರಶಾಂತ್ ಎಂಬ ವ್ಯಕ್ತಿ ತನ್ನ ತಾಯಿ, ಅಜ್ಜಿ ಮತ್ತು ಬಾವನನ್ನು ಅಮಾನುಷವಾಗಿ ಮಾರಕಾಸ್ತ್ರದಿಂದ ಕೊಚ್ಚಿ ಕೊಂದಿದ್ದಾನೆ. ಈ ನರಮೇಧದ ನಂತರ, ತಾನೂ ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಿಗೆಪಾಳ್ಯದ ಎಂಬಲ್ಲಿ ಈ ಭೀಭತ್ಸ ಘಟನೆ ನಡೆದಿದೆ. ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್ ಅವರು ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದಾರೆ.


ಪೂರ್ಣ ವಿವರ:

ದಿನಾಂಕ 11-07-2026ರಂದು ಬೆಳಿಗ್ಗೆ, ಪ್ರಶಾಂತ್‌ನ ತಂದೆ ಚಿಕ್ಕಣ್ಣ ಇಸ್ತ್ರಿ ಅಂಗಡಿ ತೆರೆಯಲು ಹೋದ ಬಳಿಕ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ಸಂಭವಿಸಿದೆ. ಅವಿವಾಹಿತನಾಗಿದ್ದ ಪ್ರಶಾಂತ್ (34), ತನ್ನ ತಾಯಿ ಮಂಗಳಮ್ಮ (55), ಅಜ್ಜಿ ನಂಜಮ್ಮ ಹಾಗೂ ಬಾವ ಸತೀಶ್ (50) ರೊಂದಿಗೆ ವಾಸವಿದ್ದನು.

ಮನೆಯಲ್ಲಿ ಮಾರಕಾಸ್ತ್ರದಿಂದ ಕಡಿದು ಮೂವರನ್ನೂ ಹತ್ಯೆ ಮಾಡುವಾಗ ಕೇಳಿದ ಚೀರಾಟ ಕೇಳಿ ನೆರೆಹೊರೆಯವರು ಧಾವಿಸಿದರು. ಆದರೆ, ಕೃತ್ಯ ಎಸಗಿದ ಬಳಿಕ, ಆರೋಪಿ ಪ್ರಶಾಂತ್ ತನ್ನನ್ನು ರೂಮೊಂದರಲ್ಲಿ ಹಿಡಿದು ಕೂಡಿ ಹಾಕಿಕೊಂಡಿದ್ದಾನೆ. ರೂಮಿನ ಒಳಗೆ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪ್ರಶಾಂತ್‌ನ ತಂದೆ ಚಿಕ್ಕಣ್ಣ ಅವರ ಹೇಳಿಕೆಯಂತೆ, ಪ್ರಶಾಂತ್ ಚಾಲಕನಾಗಿದ್ದರೂ, ತಾಯಿಯೊಂದಿಗೆ ಸಣ್ಣಪುಟ್ಟ ಜಗಳ ಮಾಡುತ್ತಿದ್ದ. ಆದರೆ, ರಾತ್ರಿ ಯಾವುದೇ ಗಲಾಟೆ ಆಗಿರಲಿಲ್ಲ. "ನಾನು ಮನೆಯಲ್ಲಿದ್ದಿದ್ದರೆ ನನ್ನನ್ನೂ ಮುಗಿಸಿ ಬಿಡುತ್ತಿದ್ದನೇನೋ ಗೊತ್ತಿಲ್ಲ. ಅವನಿಗೆ ಜ್ಞಾನ ಸರಿಯಾಗಿಯೇ ಇತ್ತು. ಯಾಕೆ ಈ ರೀತಿ ಮಾಡಿದ್ದಾನೋ ಗೊತ್ತಾಗುತ್ತಿಲ್ಲ" ಎಂದು ಚಿಕ್ಕಣ್ಣ ಹೇಳಿದ್ದಾರೆ.