ದೇಶ ವಿದೇಶ

ದೆಹಲಿ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ: ಮಾಧ್ಯಮಗಳ ಮುಂದೆ ಗಾಯಾಳು ಯುವಕನ ಟಿ-ಶರ್ಟ್ ಎತ್ತಿ ತೋರಿಸಿ ಕೇಂದ್ರಕ್ಕೆ ರಾಹುಲ್ ಗಾಂಧಿ ನೇರ ಸವಾಲು!

 



ನವದೆಹಲಿ: ದೆಹಲಿಯಲ್ಲಿ ಜುಲೈ 20 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿಗೆಯ ಮೇಲೆ ಭದ್ರತಾ ಸಿಬ್ಬಂದಿ ಪೆಲೆಟ್ ಗನ್ (Pellet Gun) ಬಳಸಿ ದೌರ್ಜನ್ಯ ಎಸಗಿದ್ದಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಾಕ್ಷ್ಯಾಧಾರಗಳಿಲ್ಲದೆ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಕಿಡಿಕಾರಿರುವ ಅವರು, ಪೆಲೆಟ್ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ 19 ವರ್ಷದ ವಿದ್ಯಾರ್ಥಿಯನ್ನು ಸ್ವತಃ ಮಾಧ್ಯಮಗಳ ಮುಂದೆ ಕರೆತಂದು ಸಾಕ್ಷಿ ಸಮೇತ ಸರ್ಕಾರದ ದೌರ್ಜನ್ಯವನ್ನು ಬಯಲು ಮಾಡಿದ್ದಾರೆ.

ರಾಷ್ಟ್ರಧ್ವಜ ಬೀಸುತ್ತಿದ್ದ ವಿದ್ಯಾರ್ಥಿಯ ಮೇಲೆ ಪೆಲೆಟ್ ದಾಳಿ:

ಪೆಲೆಟ್ ಗನ್ ದಾಳಿಯಿಂದ ಗಾಯಗೊಂಡ ನಜಾಫ್ಗಢ ನಿವಾಸಿ, ದೆಹಲಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಓಪನ್ ಲರ್ನಿಂಗ್ (SOL) ಅಂತಿಮ ವರ್ಷದ ವಿದ್ಯಾರ್ಥಿ ಸಾಹಿಲ್ ಲೋಹ್ಚಾಬ್‌ (19) ಅವರನ್ನು ರಾಹುಲ್ ಗಾಂಧಿ ಸುದ್ದಿಗೋಷ್ಠಿಗೆ ಕರೆತಂದಿದ್ದರು.

ವೇಳೆ ಮಾಧ್ಯಮಗಳ ಮುಂದೆ ಸಾಹಿಲ್ ಅವರ ಟೀ ಶರ್ಟ್ಎತ್ತಿ ತೋರಿಸಿದ ರಾಹುಲ್, ಅವರ ತೋಳು ಮತ್ತು ದೇಹದ ಮೇಲ್ಭಾಗದಲ್ಲಿದ್ದ ಪೆಲೆಟ್ಗಳಿಂದಾದ ನೂರಾರು ಗಾಯದ ಗುರುತುಗಳನ್ನು ಪ್ರದರ್ಶಿಸಿದರು.

"ಸರ್ಕಾರ ಹಾಗೂ ಪೊಲೀಸ್ ಇಲಾಖೆ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಸಿಲ್ಲ ಎಂದು ಹಸಿಸುಳ್ಳು ಹೇಳುತ್ತಿದೆ. ಆದರೆ, ಇಲ್ಲಿ ಪ್ರತ್ಯಕ್ಷ ಸಾಕ್ಷಿಯಿದೆ. ರಾಷ್ಟ್ರಧ್ವಜ ಬೀಸುತ್ತಿದ್ದ ವಿದ್ಯಾರ್ಥಿಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಸಾಹಿಲ್ ಅವರ ಬಲಗಣ್ಣಿಗೆ ಪೆಲೆಟ್ ತಗುಲಿ ತೀವ್ರ ಹಾನಿಯಾಗಿದ್ದು, ದೃಷ್ಟಿ ಮರಳಿ ಸಿಗುತ್ತದೆಯೋ ಇಲ್ಲವೋ ಎಂಬ ಖಾತರಿಯಿಲ್ಲ. ಕೇಂದ್ರ ಸರ್ಕಾರ ಭಾರತದ ಭವಿಷ್ಯದ ಮೇಲೆಯೇ ಗುಂಡು ಹಾರಿಸಿದೆ." ಎಂದು ಅವರು ಆಪಾದಿಸಿದರು.

ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನ್ಯಾಯ ಕೇಳಿದ್ದಕ್ಕೆ ಲಾಠಿ-ಪೆಲೆಟ್ ಏಟು!

ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ, ಸಾರ್ವಜನಿಕವಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ವಿದ್ಯಾರ್ಥಿಗಳ ಮೇಲೆ ಪೊಲೀಸರು ರಕ್ತಪಿಪಾಸುಗಳಂತೆ ದಾಳಿ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.

"ತಮ್ಮ ಭವಿಷ್ಯ ಹಾಳುಮಾಡಿದ ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದವರನ್ನು ವಜಾಗೊಳಿಸಿ ನ್ಯಾಯ ಕೊಡಿ ಎಂದು ಕೇಳಿದ್ದೇ ವಿದ್ಯಾರ್ಥಿಗಳು ಮಾಡಿದ ತಪ್ಪೇ?" ಎಂದು ಪ್ರಶ್ನಿಸಿರುವ ಅವರು, ವಿದ್ಯಾರ್ಥಿಗಳ ಮೇಲಿನ ಅಮಾನುಷ ದಾಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಹಿಲ್ ಹಾಗೂ ಗಾಯಗೊಂಡ ಸಮಸ್ತ ವಿದ್ಯಾರ್ಥಿಗಳ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಪೋಲಿಸ್ ಆಗುವ ಕನಸು ಕಂಡಿದ್ದ ಯುವಕನಿಗೆ 'ಏಮ್ಸ್'ನಲ್ಲಿ ಸರ್ಜರಿ!

ಗಾಯಾಳು ಸಾಹಿಲ್ ಅವರ ತಾಯಿ ಜ್ಯೋತಿ ಅವರು ಮಾತನಾಡಿ, "ನನ್ನ ಮಗ ಹೆಡ್ ಕಾನ್ಸ್ಟೆಬಲ್ ನೇಮಕಾತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಹಾಗೂ ತಂದೆಯ ಜೊತೆ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಆತನಿಗೆ ಪೊಲೀಸ್ ಇಲಾಖೆಗೆ ಸೇರಬೇಕೆಂಬ ದೊಡ್ಡ ಕನಸಿತ್ತು. ಮಂಗಳವಾರ ದೆಹಲಿಯ ಏಮ್ಸ್ (AIIMS) ಟ್ರಾಮಾ ಸೆಂಟರ್ನಲ್ಲಿ ಆತನಿಗೆ ತುರ್ತು ಶಸ್ತ್ರಚಿಕಿತ್ಸೆ ಮಾಡಲಾಗಿದೆ" ಎಂದು ಕಣ್ಣೀರಿಟ್ಟಿದ್ದಾರೆ.