ಪ್ರಾದೇಶಿಕ

ಮಂಗಳೂರಿನ ಈಗಿನ ಅಧಿಕಾರಿಗಳು ಅಂದು ಇರುತ್ತಿದ್ದರೆ ಹರೇಕಳ ಹಾಜಬ್ಬ ಶಾಲೆಯನ್ನೂ ಕಟ್ಟಿಸುತ್ತಿರಲಿಲ್ಲ, ಪದ್ಮಶ್ರಿಯೂ ಬರುತ್ತಿರಲಿಲ್ಲ !

🖋️ನವೀನ್ ಸೂರಿಂಜೆ 

ಅಂದೇನಾದರೂ ಕೃಷ್ಣಬೈರೇಗೌಡರು ರಾಜ್ಯದ ನಗರಾಭಿವೃದ್ಧಿ ಸಚಿವರಾಗಿ ಇರುತ್ತಿದ್ದರೆ ಕರ್ನಾಟಕಕ್ಕೊಂದು ಪದ್ಮಶ್ರಿ ಪ್ರಶಸ್ತಿ ಬರೋದು ತಪ್ಪುತ್ತಿತ್ತು ! ಅಥವಾ ಮಂಗಳೂರಿನ ಈಗಿನ ಅಧಿಕಾರಿಗಳು ಅಂದು ಇರುತ್ತಿದ್ದರೆ ಹರೇಕಳ ಹಾಜಬ್ಬ ಶಾಲೆಯನ್ನೂ ಕಟ್ಟಿಸುತ್ತಿರಲಿಲ್ಲ, ಪದ್ಮಶ್ರಿಯೂ ಬರುತ್ತಿರಲಿಲ್ಲ !

ಒಂದು ಕಾಲದಲ್ಲಿ ರಸ್ತೆ ಬದಿಯ ಪುಟ್‌ಪಾತ್‌ನಲ್ಲಿ ಕುಳಿತು ಕಿತ್ತಳೆ ಹಣ್ಣು ಮಾರಾಟ ಮಾಡಿ ಬಂದ ಆದಾಯದಿಂದ ತನ್ನ ಊರಿನಲ್ಲಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರನ್ನು ದೇಶ "ಅಕ್ಷರ ಸಂತ" ಎಂದು ಕರೆದಿತ್ತು. ಪದ್ಮಶ್ರೀ ಪ್ರಶಸ್ತಿ ಘೋಷಣೆಯಾದಾಗ ಜಿಲ್ಲಾಡಳಿತ ಸಂಭ್ರಮಿಸಿತು. ರಾಜ್ಯ ಸರ್ಕಾರ ಅಭಿನಂದಿಸಿತು. ಇಡೀ ಕರ್ನಾಟಕ ಹೆಮ್ಮೆಪಟ್ಟಿತು. ಜನರ ನಡುವಿನ ವೈರುಧ್ಯ ಏನೆಂದರೆ, ಇಂದು ಅದೇ ಪುಟ್‌ಪಾತ್‌ನಲ್ಲಿ ದುಡಿದು ಬದುಕುತ್ತಿರುವ ಸಾವಿರಾರು ಬಡ ವ್ಯಾಪಾರಿಗಳನ್ನು ನಗರದಿಂದ ಓಡಿಸಿದಾಗ, ಅವರ ಅಂಗಡಿಗಳನ್ನು ತೆರವುಗೊಳಿಸಿದಾಗ, ಕೆಲವರು ಅದನ್ನೇ ಅಭಿವೃದ್ಧಿಯ ಸಂಕೇತವೆಂದು ಸಂಭ್ರಮಿಸುತ್ತಿದ್ದಾರೆ.

ಹರೇಕಳ ಹಾಜಬ್ಬರು ಶಾಲೆ ಕಟ್ಟಿದ ಕಥೆ ದೇಶಕ್ಕೆ ಗೊತ್ತು. ಆದರೆ ಅವರಂತೆಯೇ ಎಷ್ಟು ಸಾವಿರ ಪುಟ್‌ಪಾತ್ ವ್ಯಾಪಾರಿಗಳು ತಮ್ಮ ದುಡಿಮೆಯ ಹಣದಿಂದ ತಮ್ಮ ಮಕ್ಕಳನ್ನು ವೈದ್ಯರು, ಇಂಜಿನಿಯರ್‌ಗಳು, ಶಿಕ್ಷಕರು, ವಕೀಲರನ್ನಾಗಿ ಮಾಡಿದ್ದಾರೋ ಯಾರಿಗೂ ಲೆಕ್ಕವಿಲ್ಲ. ಎಷ್ಟು ಜನ ತಮ್ಮ ಊರಿನ ಬಡವರ ಚಿಕಿತ್ಸೆಗೆ ನೆರವಾಗಿದ್ದಾರೋ, ದೇವಸ್ಥಾನ, ಮಸೀದಿ, ಶಾಲೆಗಳಿಗೆ ದೇಣಿಗೆ ನೀಡಿದ್ದಾರೋ, ಅನೇಕ ಕುಟುಂಬಗಳ ಬದುಕಿಗೆ ಆಧಾರವಾಗಿದ್ದಾರೋ ಅದರ ಲೆಕ್ಕವೇ ಇಲ್ಲ.

ಬೆಂಗಳೂರು, ಮಂಗಳೂರು ಸೇರಿದಂತೆ ಕರ್ನಾಟಕದ ಸಾವಿರಾರು ಬೀದಿ ವ್ಯಾಪಾರಿಗಳ ಮಕ್ಕಳು ಇಂದು ಶಿಕ್ಷಣ ಪಡೆಯುತ್ತಿರುವುದಕ್ಕೆ ಅವರ ತಂದೆ-ತಾಯಿಯ ಪುಟ್‌ಪಾತ್ ವ್ಯಾಪಾರವೇ ಕಾರಣ. ಪ್ರತಿಯೊಬ್ಬ ಮಗುವಿಗೂ ತನ್ನ ತಂದೆ-ತಾಯಿ ಹರೇಕಳ ಹಾಜಬ್ಬರೇ.

ರಸ್ತೆ ಸಂಚಾರ ಸುಗಮಗೊಳಿಸುವುದು, ನಗರವನ್ನು ಅಂದಗೊಳಿಸುವುದು, ಅತಿಕ್ರಮಣ ತೆರವುಗೊಳಿಸುವುದು ಎಂಬ ಕಾರಣಗಳನ್ನು ಆಡಳಿತ ಮುಂದಿಡುತ್ತಿದೆ. ನಗರ ವ್ಯವಸ್ಥಿತವಾಗಬೇಕು ಎಂಬುದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ ನಗರ ಸುಂದರವಾಗಬೇಕೆಂಬ ಹೆಸರಿನಲ್ಲಿ ಬಡವರ ಹೊಟ್ಟೆಯ ಮೇಲೆ ಕಾಲಿಡುವುದು ಎಷ್ಟು ಸರಿ? ಸಂಜೆ ಒಮ್ಮೆ ಬೆಂಗಳೂರಿನ ವಿಜಯನಗರದ ತಿಂಡಿಬೀದಿಗೆ ಬನ್ನಿ. ನೂರಾರು ಜನ ಐಎಎಸ್, ಐಪಿಎಸ್, ಕೆಎಎಸ್ ಓದಲೆಂದು ವಿಜಯನಗರದ ಅಕಾಡೆಮಿಗಳಿಗೆ ಬಂದವರು ಊಟ ತಿಂಡಿಗೆ ಇದೇ ತಿಂಡಿ ಬೀದಿಯನ್ನು ಅವಲಂಬಿಸಿದ್ದಾರೆ. ವಿಜಯನಗರ ತಿಂಡಿಬೀದಿ ಎನ್ನುವುದು ನೂರಾರು, ಸಾವಿರಾರು ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೆ ಅನ್ನ ನೀಡುವ ಜಾಗ. 20 ರೂ, 40 ರೂಗೆ ಹೊಟ್ಟೆ ತುಂಬುವಷ್ಟು ಸಿಗುವ ಎಗ್ ರೈಸ್, ಇಡ್ಲಿ ಮತ್ತಿತ್ತರ ಎಲ್ಲಾ ಆಹಾರಗಳನ್ನು ಅವರುಗಳು ದುಬಾರಿ ಬೆಲೆ ತೆತ್ತು ದೊಡ್ಡ ಹೊಟೇಲ್ಗಳಲ್ಲಿ ತಿನ್ನಲಾಗಲ್ಲ. ಹಾಗಾಗಿ ಇದು ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆಯಲ್ಲ. 

ಬೆಂಗಳೂರು ಇರಲಿ, ಮಂಗಳೂರು ಇರಲಿ. ನಗರಕ್ಕೊಂದು ತಾಯ್ತನ ಇರುತ್ತದೆ. ನಾವೆಲ್ಲ ಖಾಲಿ ಕೈಯ್ಯಲ್ಲಿ ಬೆಂಗಳೂರಿಗೆ ಬಂದಾಗ ನಮ್ಮನ್ನು ಪೊರೆದಿದ್ದು ಬೀದಿ ಬದಿಯ ಎಗ್ರೈಸ್ ಅಂಗಡಿಗಳೇ. ಎಂತಹ ಬಡವನಿಗೂ ನಗರಗಳು ಬದುಕು ಕೊಡುತ್ತವೆ. ಪ್ರತೀ ನಗರಕ್ಕೂ ಇಂತದ್ದೊಂದು ತಾಯ್ತನದ ಭಾಗ್ಯ ಕಲ್ಪಿಸುವುದು ಬೀದಿ ಬದಿ ಅಂಗಡಿಗಳು, ಫ್ರೂಟ್ ಸ್ಟಾಲ್ಗಳು, ತಳ್ಳುಗಾಡಿಯ ಊಟದ ಅಂಗಡಿಗಳೇ ಹೊರತು ವಾಚ್ಮೆನ್ ಗಳನ್ನು ಇಟ್ಟಿರುವ ಗಗನಚುಂಬಿ ಕನ್ನಡಿಯ ಕಟ್ಟಡಗಳಲ್ಲ ! ಗೂಡಂಗಡಿಗಳಿಲ್ಲದ ರಸ್ತೆಯಲ್ಲೊಮ್ಮೆ ನಡೆದುಕೊಂಡು ಹೋದಾಗ ಅನಾಥ ಭಾವ ಕಾಡದಿದ್ದರೆ ನಿಮಗೆ ನೋವಿನ ಅನುಭವವಿಲ್ಲ ಎಂದರ್ಥ !