ಕ್ರೈಂ

ಮೂಡಬಿದ್ರೆ ನಿಲ್ದಾಣದಲ್ಲಿ ಮಾರಕಾಸ್ತ್ರ ಝಳಪಿಸಿ ದಾಂಧಲೆ: ಮೊಬೈಲ್ ಮಳಿಗೆಗೆ ನುಗ್ಗಿ ತಲ್ವಾರ್ ತೋರಿಸಿ ದರೋಡೆಗೆ ಯತ್ನಿಸಿದ ಕಿಡಿಗೇಡಿ ಪೊಲೀಸ್ ವಶಕ್ಕೆ; ಸಿಸಿಟಿವಿ ದೃಶ್ಯ ವೈರಲ್!




ಮಂಗಳೂರು: ಜಿಲ್ಲೆಯ ಮೂಡಬಿದ್ರೆಯ  ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಶನಿವಾರ ಸಾಯಂಕಾಲ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ದಾರಿಹೋಕರು ಹಾಗೂ ಪ್ರಯಾಣಿಕರು ಇರುವಾಗಲೇ ಯುವಕನೊಬ್ಬ ತಲ್ವಾರ್ ಹಿಡಿದು ಸಾರ್ವಜನಿಕವಾಗಿ ಅಡ್ಡಾಡಿದ್ದಲ್ಲದೆ, ಸ್ಥಳೀಯ ಮೊಬೈಲ್ ಅಂಗಡಿಯೊಂದಕ್ಕೆ ನುಗ್ಗಿ ಅಲ್ಲಿದ್ದ ಸಿಬ್ಬಂದಿ ಹಾಗೂ ಗ್ರಾಹಕರಿಗೆ ಮಾರಕಾಸ್ತ್ರದಿಂದ ಜೀವ ಬೆದರಿಕೆ ಒಡ್ಡಿದ್ದಾನೆ. ಈ ರಣರಂಗದಂತಹ ದೃಶ್ಯಗಳು  ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣವೇ ಆರೋಪಿಯನ್ನು ಬಂಧಿಸಿದ್ದಾರೆ.





ರಸ್ತೆಯಲ್ಲೇ  ತಲ್ವಾರ್ ಪ್ರದರ್ಶನ:

ಜುಲೈ 18ರ ಶನಿವಾರ ಸಂಜೆಯ ಸುಮಾರಿಗೆ ಮೂಡಬಿದ್ರೆ ಸಾರ್ವಜನಿಕ ಬಸ್ ನಿಲ್ದಾಣದ ಪರಿಸರದಲ್ಲಿ ಈ ಘಟನೆ ಜರುಗಿದೆ. ಆರೋಪಿ ಯುವಕನು ಪ್ರಯಾಣಿಕರು ಹಾಗೂ ನಾಗರಿಕರು ದಟ್ಟವಾಗಿ ಓಡಾಡುವ ರಸ್ತೆಯಲ್ಲೇ ಉದ್ದನೆಯ ತಲ್ವಾರ್ ಹಿಡಿದುಕೊಂಡು ಸೊಕ್ಕಿನಿಂದ ಹೆಜ್ಜೆ ಹಾಕಿದ್ದಾನೆ. ಜನನಿಬಿಡ ಪ್ರದೇಶದಲ್ಲಿ ಈ ರೀತಿ ಮಾರಕಾಸ್ತ್ರ ಹಿಡಿದು ಸಂಚರಿಸುತ್ತಿದ್ದ ಆತನ ಹುಚ್ಚಾಟವನ್ನು ಕಂಡು ಬಸ್ ನಿಲ್ದಾಣದಲ್ಲಿದ್ದ ಜನರು ಆತಂಕಗೊಂಡಿದ್ದಾರೆ.




 

ಮೊಬೈಲ್ ಅಂಗಡಿಗೆ ನುಗ್ಗಿ ಬೆದರಿಕೆ 


ಬಸ್ ನಿಲ್ದಾಣದ ಒಳಭಾಗದಲ್ಲೇ ಕಾರ್ಯನಿರ್ವಹಿಸುತ್ತಿದ್ದ ಮೊಬೈಲ್ ಮಳಿಗೆಗೆ ಗ್ರಾಹಕರು ಭೇಟಿ ನೀಡಿದ್ದ ಸಂದರ್ಭದಲ್ಲಿಯೇ ಈ ಖದೀಮ ಒಳಗೆ ನುಗ್ಗಿದ್ದಾನೆ. ನೇರವಾಗಿ ವ್ಯಾಪಾರದ ಕೌಂಟರ್ ಬಳಿ ತೆರಳಿದ ಆತ, ತನ್ನ ಜೀನ್ಸ್ ಪ್ಯಾಂಟ್ ಒಳಗಡೆ ಅಡಗಿಸಿಟ್ಟಿದ್ದ ತಲ್ವಾರ್ ಅನ್ನು ಹೊರಗೆ ಎಳೆದಿದ್ದಾನೆ. ತಕ್ಷಣ ಸಿಬ್ಬಂದಿಗೆ ಆಯುಧವನ್ನು ತೋರಿಸಿ ಹೆದರಿಸುತ್ತಾ, ಅಂಗಡಿಯಲ್ಲಿದ್ದ ಮೊಬೈಲ್ ಫೋನ್‌ಗಳನ್ನು ತನಗೆ ಒಪ್ಪಿಸುವಂತೆ ಧಮ್ಕಿ ಹಾಕಿದ್ದಾನೆ.

ಅಷ್ಟಕ್ಕೇ ನಿಲ್ಲದೆ ಕೌಂಟರ್‌ನಲ್ಲಿದ್ದ ನೌಕರರ ಮೇಲೆಯೇ ತಲ್ವಾರ್ ಬೀಸಲು ಮುಂದಾಗಿದ್ದಾನೆ. ಈ ವೇಳೆ ಮಳಿಗೆಯಲ್ಲಿದ್ದ ಗ್ರಾಹಕರು ಭಯದಿಂದ ಹಿಂದೆ ಸರಿದಿದ್ದಾರೆ. ಆದರೆ ಸಮಯಪ್ರಜ್ಞೆ ಮೆರೆದ ಅಂಗಡಿಯ ನೌಕರರು ಹಾಗೂ ಸಾರ್ವಜನಿಕರು ಒಟ್ಟಾಗಿ ಸೇರಿ ಹಲ್ಲೆಕೋರ ಯುವಕನನ್ನು ತಡೆದು, ಆತನ ಕೈಯಲ್ಲಿದ್ದ ಮಾರಕಾಸ್ತ್ರವನ್ನು ಬಲವಂತವಾಗಿ ಕಸಿದುಕೊಂಡು ಆತನನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಅಂಗಡಿಯಲ್ಲಿ ಗದ್ದಲ ಉಂಟಾಗುತ್ತಿದ್ದಂತೆ ಎಚ್ಚೆತ್ತ ಸ್ಥಳೀಯರು ತಕ್ಷಣವೇ ಮೂಡಬಿದ್ರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ಧಾವಿಸಿದ ಪೊಲೀಸರು, ಸಾರ್ವಜನಿಕ ಶಾಂತಿ ಕದಡುತ್ತಿದ್ದ ಯುವಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ತಲವಾರು ಬೀಸಿ ದಾಂಧಲೆಗೆ ಯತ್ನಿಸಿದ ಆರೋಪಿಯನ್ನು ಈಗಾಗಲೇ ಕಾನೂನು ಬಲೆಗೆ ಬೀಳಿಸಲಾಗಿದ್ದು, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಪ್ರಸ್ತುತ ಆರೋಪಿಯ ಹಿನ್ನೆಲೆ ಹಾಗೂ ಈ ಭೀಕರ ಕೃತ್ಯದ ಹಿಂದಿನ ನೈಜ ಕಾರಣಗಳ ಕುರಿತು ವಿಚಾರಣೆ ಮುಂದುವರಿದಿದೆ.