ಧಾರಾಕಾರ ಮಳೆಯಿಂದ ಮಂಗಳೂರಿನಿಂದ ಮೂಡಬಿದಿರೆಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ರ ಕೆತ್ತಿಕಲ್ಲಿನಲ್ಲಿ ಮತ್ತೆ ಭೂ ಕುಸಿತ
🖋️ಕಮಲಾಕ್ಷ ಬಜಾಲ್
ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರ ಜೀವಕ್ಕೆ ಅಪಾಯ:
ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಗುಡ್ಡಗಳನ್ನು ಅವೈಜ್ಞಾನಿಕವಾಗಿ ಕತ್ತರಿಸಿರುವ ಪರಿಣಾಮ ಮಳೆ ಬಂದಾಗಲೆಲ್ಲಾ ನಿರಂತರವಾಗಿ ಭೂಕುಸಿತ ಸಂಭವಿಸುತ್ತಿದೆ. ಗುಡ್ಡದ ಮಣ್ಣು ಮತ್ತು ಬಂಡೆಗಳು ರಸ್ತೆಯ ಮೇಲೆ ಜರಿದು ಬೀಳುತ್ತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಜೀವಭಯದಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಪ್ರಕೃತಿ ವಿಕೋಪ ಮಾತ್ರವಲ್ಲ; ಸೂಕ್ತ ಯೋಜನೆ, ವೈಜ್ಞಾನಿಕ ಅಧ್ಯಯನ ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ನಡೆಸಿದ ಕಾಮಗಾರಿಯ ಪರಿಣಾಮವೂ ಆಗಿದೆ. ಭೂಕುಸಿತಗಳು ಪದೇ ಪದೇ ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿರುವುದು ಅತ್ಯಂತ ವಿಪರ್ಯಾಸ.
ತಕ್ಷಣವೇ ಭೂಕುಸಿತ ಪ್ರದೇಶಗಳ ಭೂವೈಜ್ಞಾನಿಕ ಪರಿಶೀಲನೆ ನಡೆಸಿ, ಬಲಿಷ್ಠ ತಡೆಗೋಡೆಗಳನ್ನು ನಿರ್ಮಿಸುವುದು, ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಕಲ್ಪಿಸುವುದು, ಗುಡ್ಡದ ಇಳಿಜಾರನ್ನು ವೈಜ್ಞಾನಿಕವಾಗಿ ಸ್ಥಿರಗೊಳಿಸುವುದು ಹಾಗೂ ಅಪಾಯಕಾರಿ ಪ್ರದೇಶಗಳಲ್ಲಿ ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಜಾರಿಗೆ ತರಬೇಕೆಂದು ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
