ಪ್ರಾದೇಶಿಕ

ದಕ್ಷಿಣ ಕನ್ನಡದಲ್ಲಿ ಧೋ ಮಳೆ: ನಾಳೆ ( ಆಗಷ್ಟ್ 3) ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ!



ಮಂಗಳೂರು (ಆಗಸ್ಟ್ 2): ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಾಳೆ, ಆಗಸ್ಟ್ 3 (ಸೋಮವಾರ) ರಂದು ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ತುರ್ತು ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಎರಡು ಉಪವಿಭಾಗಗಳಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ನೀಡಿರುವ ನಿಯಮಗಳಲ್ಲಿ ವ್ಯತ್ಯಾಸವಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಕೆಳಗಿನ ವಿವರಗಳನ್ನು ಗಮನಿಸಬೇಕಾಗಿದೆ:

1. ಮಂಗಳೂರು ಉಪವಿಭಾಗ (ಮಂಗಳೂರು, ಬಂಟ್ವಾಳ, ಮೂಡುಬಿದಿರೆ, ಮುಲ್ಕಿ, ಉಳ್ಳಾಲ ತಾಲೂಕುಗಳು):

ಈ ಭಾಗದ ಎಲ್ಲಾ ಅಂಗನವಾಡಿಗಳು, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ (10 ನೇ ತರಗತಿವರೆಗೆ) ರಜೆ ಅನ್ವಯವಾಗಲಿದೆ.

2. ಪುತ್ತೂರು ಉಪವಿಭಾಗ (ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕುಗಳು):

ಈ ತಾಲೂಕುಗಳಲ್ಲಿ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮಾತ್ರವಲ್ಲದೆ ಪದವಿ ಪೂರ್ವ ಕಾಲೇಜುಗಳು (PUC / 12ನೇ ತರಗತಿವರೆಗೆ), ITI ಮತ್ತು ಡಿಪ್ಲೊಮಾ ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.

(ಸೂಚನೆ: ಎರಡೂ ವಿಭಾಗಗಳಲ್ಲಿ ಬರುವ ಎಲ್ಲಾ ವಸತಿ ಶಾಲೆ ಹಾಗೂ ಕಾಲೇಜುಗಳಿಗೂ ಈ ರಜೆ ಆದೇಶ ಅನ್ವಯಿಸುತ್ತದೆ).

ಜಿಲ್ಲಾಡಳಿತದಿಂದ ಜಾಗೃತಿ ಕರೆ: ಮಳೆ ತೀವ್ರವಾಗಿರುವ ಕಾರಣ ಮಕ್ಕಳು ನದಿ, ಕೆರೆ, ಹರಿಯುವ ನೀರು ಹಾಗೂ ಸಮುದ್ರ ತೀರಕ್ಕೆ ತೆರಳದಂತೆ ಪೋಷಕರು ವಿಶೇಷ ಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ವಿನಂತಿಸಿದ್ದಾರೆ. ತುರ್ತು ನೆರವಿಗಾಗಿ ಸಾರ್ವಜನಿಕರು 1077 ಅಥವಾ 0824-2442590 ಉಚಿತ ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ.