ಕ್ರೈಂ

ಬಂಟ್ವಾಳ: ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಲ್ಲಿ ಶಾಕ್ ತಗುಲಿ ಎಲೆಕ್ಟ್ರಿಷಿಯನ್ ಸಾವು!



ಬಂಟ್ವಾಳ: ತಾಲೂಕಿನ ಕರಿಯಂಗಳ ಗ್ರಾಮದ ತಂತ್ರಿಬೆಟ್ಟು ಎಂಬಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮೇಲೆ ವಿದ್ಯುತ್ ಶಾಕ್ ತಗುಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಮೃತಪಟ್ಟ ಘಟನೆ ಸಂಭವಿಸಿದೆ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಪ್ರಕಟಣೆ ತಿಳಿಸಿದೆ.

ಮೃತರನ್ನು ಕರಿಯಂಗಳ ಗ್ರಾಮದ ತಂತ್ರಿಬೆಟ್ಟು ನಿವಾಸಿ ದಿನೇಶ್ ಎಂಬವರ ತಮ್ಮ, ಅವಿವಾಹಿತ ಹರೀಶ್ ಟಿ. (38) ಎಂದು ಗುರುತಿಸಲಾಗಿದೆ.

ಘಟನೆಯ ವಿವರ:

ಎಲೆಕ್ಟ್ರಿಷಿಯನ್ ವೃತ್ತಿ ಮಾಡುತ್ತಿದ್ದ ಹರೀಶ್ ಅವರು ಆಗಸ್ಟ್ 16ರಂದು ಎಂದಿನಂತೆ ಕೆಲಸ ಮುಗಿಸಿ ಮನೆಗೆ ಬಂದು ಊಟ ಮಾಡಿ ಮಲಗಿದ್ದರು. ಮರುದಿನ ಆಗಸ್ಟ್ 17ರಂದು ಬೆಳಿಗ್ಗೆ 7:00 ಗಂಟೆಗೆ ಮನೆಯವರು ಎದ್ದು ನೋಡಿದಾಗ ಹರೀಶ್ ಮನೆಯಲ್ಲಿ ಕಾಣಿಸಿರಲಿಲ್ಲ.

ಬೆಳಿಗ್ಗೆ 7:30ರ ಸುಮಾರಿಗೆ ಸ್ಥಳೀಯ ಪುರುಷೋತ್ತಮ ಎಂಬವರು ಮೃತರ ಸಹೋದರ ದಿನೇಶ್ ಅವರಿಗೆ ಫೋನ್ ಕರೆ ಮಾಡಿ, "ತಂತ್ರಿಬೆಟ್ಟುವಿನಲ್ಲಿರುವ ಟ್ರಾನ್ಸ್‌ಫಾರ್ಮರ್ ಬಳಿ ಶಬ್ದ ಬಂದು ವಿದ್ಯುತ್ ವ್ಯತ್ಯಯವಾಗಿದೆ. ಅಲ್ಲಿ ಹೋಗಿ ನೋಡಿದಾಗ ಹರೀಶ್‌ನ ಬೈಕ್ ನಿಂತಿದ್ದು, ಆತನ ಕೈಗೆ ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದಿದ್ದಾನೆ" ಎಂದು ಮಾಹಿತಿ ನೀಡಿದ್ದಾರೆ. ತಕ್ಷಣ ಕುಟುಂಬಸ್ಥರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಹರೀಶ್ ಟ್ರಾನ್ಸ್‌ಫಾರ್ಮರ್ ಕೆಳಗೆ ಮೃತಪಟ್ಟು ಬಿದ್ದಿರುವುದು ಕಂಡುಬಂದಿದೆ.

ಮೃತ ಹರೀಶ್ ಅವರು ಜೀವನದಲ್ಲಿ ಜಿಗುಪ್ಸೆಗೊಂಡು, ಇನ್ನಾವುದೋ ವಿಚಾರದಲ್ಲಿ ಮನನೊಂದು ಅಥವಾ ವಿದ್ಯುತ್ ರಿಪೇರಿ ಉದ್ದೇಶಕ್ಕಾಗಿ ಬೆಳಿಗ್ಗೆ 6:30 ರಿಂದ 7:30 ರ ಮಧ್ಯದ ಅವಧಿಯಲ್ಲಿ ಟ್ರಾನ್ಸ್‌ಫಾರ್ಮರ್ ಮೇಲೆ ಹತ್ತಿದಾಗ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಮೃತರ ಅಣ್ಣ ದಿನೇಶ್ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 42/2026 ಕಲಂ: 194 BNSS 2023 ರಂತೆ ಪ್ರಕರಣ ದಾಖಲಾಗಿದೆ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಪ್ರಕಟಣೆ ತಿಳಿಸಿದೆ.