ಡಿಸಿ ಮನ್ನಾ ಭೂಮಿ ವಿಚಾರ ಇನ್ನಷ್ಟು ವಿಳಂಬವಾದರೆ ಜಿಲ್ಲೆಗೆ ಆಗಮಿಸುವ ಸಚಿವರುಗಳ ವಿರುದ್ಧ ತೀವ್ರ ಪ್ರತಿಭಟನೆ : ದಲಿತ ಸಂಘಟನೆಗಳ ಸಮನ್ವಯ ಸಮಿತಿ
ದ. ಕ.ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಸಭೆಯನ್ನು ಮಂಗಳವಾರ ನಗರದಲ್ಲಿ ಶ್ರೀ ಚಂದ್ರಕುಮಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸರ್ಕಾರದ ನಿರ್ಲಕ್ಷ್ಯ
ಪ್ರಮುಖವಾಗಿ ಈ ಸಭೆಯಲ್ಲಿ ಡಿ. ಸಿ. ಮನ್ನಾ ಭೂ ಹಂಚಿಕೆಯ ಬಗ್ಗೆ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ, ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಚರ್ಚಿಸಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲರೂ ಒಮ್ಮತದಿಂದ ಜಿಲ್ಲಾಡಳಿತ ಹಾಗೂ ಸರ್ಕಾರದ ದಲಿತ ವಿರೋಧಿ ನೀತಿಯನ್ನು ಖಂಡಿಸಿ, ಡಿ.ಸಿ. ಮನ್ನಾ ಭೂಮಿಯ ವಿಚಾರವಾಗಿ ಕಂದಾಯ ಸಚಿವರನ್ನು ಸಮನ್ವಯ ಸಮಿತಿಯ ನಿಯೋಗವು ಆದಷ್ಟು ಶೀಘ್ರವಾಗಿ ಭೇಟಿ ಮಾಡಿ ಒಂದು ತಿಂಗಳೊಳಗೆ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ದಕ್ಷಿಣ ಕನ್ನಡ ಹಾಗೂ ಉಡುಪಿ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿದಂತೆ ಸಮನ್ವಯ ಸಮಿತಿಯ ಮುಖಂಡರ ಉಪಸ್ಥಿತಿಯಲ್ಲಿ ಸಭೆ ಕರೆದು ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಕ್ರಮ ವಹಿಸುವಂತೆ ಕಂದಾಯ ಸಚಿವರಿಗೆ ಒತ್ತಾಯಿಸುವಂತೆ ನಿರ್ಣಯಿಸಲಾಯಿತು.
ಸರಕಾರದ ವಿರುದ್ಧ ಪ್ರತಿಭಟನೆಗೆ ನಿರ್ಧಾರ
ಒಂದು ವೇಳೆ ಡಿ.ಸಿ.ಮನ್ನಾ ಭೂ ಹಂಚಿಕೆ ವಿಚಾರವಾಗಿ ಸರ್ಕಾರವು ಇನ್ನಷ್ಟು ವಿಳಂಬ ನೀತಿ ಅನುಸರಿಸಿ ದಲಿತ ವಿರೋಧಿ ಧೋರಣೆಯನ್ನು ಮುಂದುವರಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಗೆ ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಇಲಾಖೆಗೆ ಸಂಬಂಧಿಸಿದ ಸಚಿವರ ವಿರುದ್ಧ ಪ್ರತಿಭಟನೆ ನಡೆಸುವ ಬಗ್ಗೆ ಒಮ್ಮತದಿಂದ ತೀರ್ಮಾನಿಸಲಾಯಿತು.
ಸಚಿವ ಯುಟಿ ಖಾದರ್ ನಿಲುವಿಗೆ ಖಂಡನೆ
ಅಲ್ಲದೆ ಈ ಜಿಲ್ಲೆಯವರಾದ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರ ದಲಿತ ವಿರೋಧಿ ಮನಸ್ಥಿತಿ ಮತ್ತು ಡಿ.ಸಿ.ಮನ್ನಾ ಭೂಮಿ ವಿಚಾರದ ನಿರ್ಲಕ್ಷ್ಯವನ್ನು ಈ ಸಂದರ್ಭದಲ್ಲಿ ಖಂಡಿಸಲಾಯಿತು. ಸಭೆಯಲ್ಲಿ ಹಿಂದಿನ ಸಮನ್ವಯ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಪ್ರಧಾನ ಸಂಚಾಲಕರಾಗಿ ರಮೇಶ್ ಕೋಟ್ಯಾನ್ ಉಪ ಪ್ರಧಾನ ಸಂಚಾಲಕರಾಗಿ ರಘು. ಕೆ. ಎಕ್ಕಾರು, ಸಂಚಾಲಕರಾಗಿ ಎಸ್. ಪಿ.ಆನಂದ, ಸದಾಶಿವ ಪಡುಬಿದ್ರಿ, ಸರೋಜಿನಿ ಬಂಟ್ವಾಳ, ಸಂಜೀವ ಆರ್. ಬೆಳ್ತಂಗಡಿ, ಆನಂದ ಬೆಳ್ಳಾರೆ, ಕೃಷ್ಣಾನಂದ.ಡಿ., ಬಿ.ಕೆ ವಸಂತ್ ಬೆಳ್ತಂಗಡಿ, ಕಾರ್ಯದರ್ಶಿಯಾಗಿ ಅಶೋಕ್ ಕೊಂಚಾಡಿ, ಖಜಾಂಚಿಯಾಗಿ ರಮೇಶ್ ಕಾವೂರು, ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು. ಡಿ.ಸಿ. ಮನ್ನಾ ಭೂ ಹಂಚಿಕೆ ವಿಚಾರದ ಪ್ರಗತಿ ಹಾಗೂ ಇನ್ನಿತರ ಪ್ರಮುಖ ವಿಚಾರಗಳ ಬಗ್ಗೆ ಸಮಿತಿಯು ಪ್ರತಿ ತಿಂಗಳಿಗೊಮ್ಮೆ ಸಭೆ ಸೇರಿ ಚರ್ಚಿಸುವ ಬಗ್ಗೆ ತೀರ್ಮಾನಿಸಲಾಯಿತು.
