ಬಜಪೆ ಪಟ್ಟಣ ಪಂಚಾಯತ್ ಕೌನ್ಸಿಲರ್ ಚೆನ್ನಪ್ಪ ಸಾಲ್ಯಾನ್ ನಿಧನ
ಬಜಪೆ ಪಟ್ಟಣ ಪಂಚಾಯತ್ ಸಿದ್ದಾರ್ಥ ನಗರ ವಾರ್ಡ್-19ರ ಕೌನ್ಸಿಲರ್ ಚೆನ್ನಪ್ಪ ಸಾಲ್ಯಾನ್ (56ವ) ರವರು ಅಲ್ಪ ಕಾಲದ ಅನಾರೋಗ್ಯದಿಂದ ಇಂದು ಬೆಳಿಗ್ಗೆ ವೆನ್‌ಲಾಕ್ ಆಸ್ಪತ್ರೆಗೆ ದಾಖಲಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ದಿವಂಗತರು ಈ ಹಿಂದೆ ಮಳವೂರು ಗ್ರಾಮ ಪಂಚಾಯತ್ ಕೆಂಜಾರು 3ನೇ ವಾರ್ಡಿನ ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಇದ್ದರು.
ಚೆನ್ನಪ್ಪ ಸಾಲ್ಯಾನ್ ರವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೆಂಜಾರು ಮೂರನೇ ವಾರ್ಡ್ ನ ಗ್ರಾಮ ಸಮಿತಿಯ ಗ್ರಾಮ ಸಂಚಾಲಕರಾಗಿಯೂ ಕಾರ್ಯನಿರ್ವಹಿಸಿದ್ದ ದಿವಂಗತರು ದಲಿತ ಸಂಘರ್ಷ ಸಮಿತಿ ಪ್ರೊ.ಬಿ ಕೃಷ್ಣಪ್ಪ ಬಣದ ಸಕ್ರಿಯ ಕಾರ್ಯಕರ್ತರಾಗಿಯೂ ಇದ್ದರು. ಅನಾರೋಗ್ಯದ ನಡುವೆಯೂ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದ ಚೆನ್ನಪ್ಪ ಸಾಲ್ಯಾನ್ ರವರು ಮಿತ ಭಾಷಿಯು, ಸೌಮ್ಯ ಸ್ವಭಾವದವರಾಗಿದ್ದರು. ಚೆನ್ನಪ್ಪ ಸಾಲ್ಯಾನ್ ರವರು ಪತ್ನಿ, ಸಹೋದರರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಿದ್ದಾರ್ಥ ನಗರದ ನಿವಾಸದಲ್ಲಿ ಸಾರ್ವಜನಿಕರಿಗೆ ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಮಧ್ಯಾಹ್ನ 1:00 ರಿಂದ ವ್ಯವಸ್ಥೆಗೊಳಿಸಲಾಗಿದ್ದು, ಸುಮಾರು 2:30 ರ ಸಮಯಕ್ಕೆ ಮೃತರ ಅಂತಿಮ ವಿಧಿ ವಿಧಾನ ಕಾರ್ಯ ನಡೆಯಲಿದೆ.
